ಚೆನ್ನೈ: ‘ನನ್ನ ಹೃದಯ ಛಿದ್ರವಾಗಿದೆ. ಪದಗಳಲ್ಲಿ ವರ್ಣಿಸಲಸಾಧ್ಯವಾದ ಅಸಹನೀಯ ದುಃಖದಲ್ಲಿ ನರಳುತ್ತಿದ್ದೇನೆ’ ಎಂದು ಕರೂರು ಕಾಲ್ತುಳಿತ ಪ್ರಕರಣದ ಬಗ್ಗೆ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಜಯ್ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಅತೀವ ನೋವಿನಲ್ಲಿ ನಾನು ನರಳುತ್ತಿದ್ದೇನೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ನನ್ನ ಪ್ರೀತಿಯ ಸಹೋದರ, ಸಹೋದರಿಯರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಕಾಲ್ತುಳಿತ ಘಟನೆ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದ ಸಮಿತಿ ರಚನೆ ಮಾಡಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಆದೇಶಿಸಿದ್ದಾರೆ.
ಕಾಲ್ತುಳಿತಕ್ಕೆ ಕಾರಣವೇನು?
ಮುಂಬರುವ ತಮಿಳನಾಡು ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ವಿಜಯ್ ಅವರು ತಮ್ಮ ಪಕ್ಷದ ಪರ ರಾಜ್ಯದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ಶನಿವಾರ ಕರೂರಿನಲ್ಲಿ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಿದ್ದು, ರ್‍ಯಾಲಿ ನಡೆಯುತ್ತಿದ್ದ ಸ್ಥಳಕ್ಕೆ ವಿಜಯ್ ಆರು ತಾಸು ತಡವಾಗಿ ಬಂದಿದ್ದರು.
ಈ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ಜನರು ಅಪಾರ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಪೋಷಕರೊಂದಿಗೆ ಪುಟ್ಟ ಮಕ್ಕಳು ಕೂಡ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಉಸಿರುಗಟ್ಟಿ ಕನಿಷ್ಠ 38 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.