ಕರೂರು(ತಮಿಳುನಾಡು): ಕರೂರು ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ರಾಜ್ಯಸಭಾ ಸಂಸದ, ಮಕ್ಕಳ್ ನೀಧಿ ಮಯ್ಯಂ ಮುಖ್ಯಸ್ಥ ಕಮಲ್ ಹಾಸನ್ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಹಾಸನ್, ‘ಈ ವಿಷಯವು ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಈ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ. ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ವಿಶೇಷವಾಗಿ ಆಯೋಜಕರಿಗೆ. ಇದು ತಪ್ಪೊಪ್ಪಿಕೊಂಡು, ಕ್ಷಮೆಯಾಚಿಸುವ ಸಮಯ’ ಎಂದಿದ್ದಾರೆ.
‘ತಮಿಳುನಾಡಿನ ನಾಗರಿಕನಾಗಿ ಈ ವಿಷಯದಲ್ಲಿ ಯಾವುದೇ ಪಕ್ಷವನ್ನು ವಹಿಸಿ ಮಾತನಾಡುವುದಿಲ್ಲ. ಹಾಗೊಂದು ವೇಳೆ ಪಕ್ಷ ತೆಗೆದುಕೊಳ್ಳಬೇಕಾದರೆ, ಜನರ ಪಕ್ಷ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
‘ಈ ವಿಷಯದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಧನ್ಯವಾದ ಹೇಳಬೇಕು’ ಎಂದಿದ್ದಾರೆ.
ಸೆಪ್ಟೆಂಬರ್ 27ರಂದು ಕರೂರಿನಲ್ಲಿ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ್‍ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದರು. 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಘಟನೆ ಸಂಬಂಧ ಟಿವಿಕೆ ಪಕ್ಷದ ಇಬ್ಬರು ಮುಖಂಡರ ಬಂಧನವಾಗಿದೆ.
ಘಟನೆ ನಡೆದು ಮೂರು ವಾರ ಕಳೆದರೂ ಟವಿಕೆ ಮುಖ್ಯಸ್ಥ ವಿಜಯ್ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.