ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ
–ಪಿಟಿಐ ಚಿತ್ರ
ಶ್ರೀನಗರ: ಜಮ್ಮು–ಕಾಶ್ಮೀರದ ರಿಯಾಸಿ ಮತ್ತು ರಂಬನ್ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮೇಘಸ್ಫೋಟ ಮತ್ತು ಭೂಕುಸಿತದ ಅವಘಡಗಳಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ.
ರಿಯಾಸಿ ಜಿಲ್ಲೆಯ ಬದ್ದರ್ ಗ್ರಾಮದಲ್ಲಿ ರಾತ್ರೋರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ. ಮಣ್ಣು ಮತ್ತು ಕಲ್ಲು ಬಿದ್ದ ಪರಿಣಾಮ ಮನೆಯೊಂದು ಕುಸಿದಿದ್ದು, ಐವರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.
ರಂಬನ್ ಜಿಲ್ಲೆಯ ರಾಜಗೃಹ ಗ್ರಾಮದಲ್ಲಿಯೂ ಮೇಘಸ್ಫೋಟದಿಂದ, ಐವರು ಪ್ರಾಣ ಕಳೆದುಕೊಂಡಿದ್ದಾರೆ. ದಿಢೀರ್ ಪ್ರವಾಹದಿಂದಾಗಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ಮಣ್ಣು ಮತ್ತು ಕಲ್ಲುಗಳು ಬಿಛಾಲ್‌ರಿ ನದಿಗೆ ಬಿದ್ದಿರುವ ಪರಿಣಾಮ ನೀರಿನ ಹರಿವು ಸ್ಥಗಿತವಾಗಿದೆ. ನದಿಪಾತ್ರದಲ್ಲಿನ ಮನೆಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ಉಧಮ್‌ಪುರದಲ್ಲಿ ಒಂದೇ ದಿನ 629 ಮಿ.ಮೀ ಮಳೆ ಸುರಿದಿದ್ದು, ಭೂಕುಸಿತ ಸೇರಿದಂತೆ ಅಪಾರ ಹಾನಿ ಸಂಭವಿಸಿದೆ.
ಕಳೆದ ಮೂರು ವಾರಗಳಿಂದ ವರುಣನ ಅಬ್ಬರಕ್ಕೆ ಜಮ್ಮು–ಕಾಶ್ಮೀರ ತತ್ತರಿಸಿದೆ. ಆಗಸ್ಟ್ ಎರಡನೇ ವಾರದಿಂದ ಸಂಭವಿಸಿದ ಮೇಘಸ್ಫೋಟ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಮಾತ ವೈಷ್ಣೋದೇವಿ ಭಕ್ತರು ಸೇರಿದಂತೆ ಇದುವರೆಗೆ ಒಟ್ಟು 160 ಜನ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ರಿಯಾಸಿಯ ಕತ್ರಾದಲ್ಲಿ 34 ಮಂದಿ ಮೃತಪಟ್ಟಿದ್ದರು.
ಮೂಲಸೌಕರ್ಯಗಳಿಗೂ ಹಾನಿಯಾಗಿದೆ. ಕತ್ರಾ, ವೈಷ್ಣೋದೇವಿ ತಪ್ಪಲಿನ ಶಿಬಿರ ಮತ್ತು ದೇಶದ ಇತರ ಭಾಗಗಳನ್ನು ಸಂಪರ್ಕಿಸುವ ರೈಲು ಸೇವೆ ಐದನೇ ದಿನವೂ ಸ್ಥಗಿತಗೊಂಡಿದೆ. ಭೂಕುಸಿತ ಮತ್ತು ಬಂಡೆಗಳು ಉರುಳಿಬಿದ್ದಿರುವ ಕಾರಣ ನಾಲ್ಕು ದಿನಗಳಿಂದ ಮುಚ್ಚಿದ್ದ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹಿಮಾಚಲಪ್ರದೇಶದ ಶಿಮ್ಲಾ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಭೂಕುಸಿತ ಸಂಭವಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ. ಐದು ಮನೆಗಳಿಗೆ ಹಾನಿಯಾಗಿದೆ. ಮಣಿಮಹೇಶ ಯಾತ್ರೆ ಕೈಗೊಂಡಿದ್ದ ಸಾವಿರಾರು ಭಕ್ತರು ಛಂಬಾ ಜಿಲ್ಲೆಯಲ್ಲಿ ಸಿಲುಕಿದ್ದಾರೆ. ಆಗಸ್ಟ್ 24ರಿಂದ ಈವರೆಗೆ 10 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 560 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.