ADVERTISEMENT

Ganesh Chaturthi: 35 ವರ್ಷಗಳ ನಂತರ ಕಾಶ್ಮೀರಿ ಪಂಡಿತರ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 14:48 IST
Last Updated 31 ಆಗಸ್ಟ್ 2025, 14:48 IST
   

ಶ್ರೀನಗರ: ಗಣೇಶ ಚತುರ್ಥಿ ಆಚರಣೆಯ ಭಾಗವಾಗಿ ಕಣಿವೆಯ ಕಾಶ್ಮೀರಿ ಪಂಡಿತರು 3 ದಶಕಗಳ ಬಳಿಕ ರಥಯಾತ್ರೆ ನಡೆಸಿದರು. 35 ವರ್ಷಗಳ ಹಿಂದೆ ಭಯೋತ್ಪಾದನೆ ಭುಗಿಲೆದ್ದ ನಂತರ ರಥಯಾತ್ರೆ ಸ್ಥಗಿತಗೊಂಡಿತ್ತು.

ನಗರದ ಹಬ್ಬಾ ಕಡಲ್ ಪ್ರದೇಶದ ಗಣಪತಿಯಾರ್ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಯಿತು. ಝೀಲಂನಲ್ಲಿ ಪಂಡಿತ ಸಮುದಾಯವು ಗಣಪತಿ ವಿಸರ್ಜನೆಯನ್ನು ಸಹ ಕೈಗೊಂಡಿತು.

ಗಣಪತಿಯಾರ್ ದೇವಸ್ಥಾನದಿಂದ ರಥಯಾತ್ರೆಯನ್ನು ನಡೆಸಲಾಯಿತು ಮತ್ತು ಗಣೇಶ ಮೂರ್ತಿಯನ್ನು ಝೀಲಂನಲ್ಲಿ ವಿಸರ್ಜಿಸಲಾಯಿತು ಎಂದು ಕಾರ್ಯಕರ್ತ ಸಂಜಯ್ ಟಿಕೂ ಪಿಟಿಐಗೆ ತಿಳಿಸಿದರು.

ADVERTISEMENT

ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆ ಭುಗಿಲೆದ್ದ ನಂತರ ನಡೆದ ಮೊದಲ ಮೆರವಣಿಗೆ ಎಂದು ಅವರು ಹೇಳಿದರು.

‘ನೈಸರ್ಗಿಕ ವಿಕೋಪಗಳು ನಿಲ್ಲಲಿ ಮತ್ತು ಜಾತಿ, ಧರ್ಮವನ್ನು ಲೆಕ್ಕಿಸದೆ ಎಲ್ಲ ಜನರು ಪ್ರೀತಿಯಿಂದ ಒಟ್ಟಿಗೆ ಬದುಕಲಿ ಎಂದು ನಾವು ಪ್ರಾರ್ಥಿಸಿದ್ದೇವೆ. ನೈಸರ್ಗಿಕ ವಿಕೋಪಗಳಿಂದ ನಮ್ಮನ್ನು ರಕ್ಷಿಸಬೇಕೆಂದು ನಾವು ಪ್ರಾರ್ಥಿಸಿದ್ದೇವೆ’ಎಂದು ಟಿಕೂ ಹೇಳಿದರು.

ಸಮುದಾಯವು ಕಳೆದ ಮೂರು ವರ್ಷಗಳಿಂದ ಕಣಿವೆಯಲ್ಲಿ ಗಣಪತಿ ವಿಸರ್ಜನೆಯನ್ನು ಆಯೋಜಿಸುತ್ತಿದೆ ಎಂದು ಕಾಶ್ಮೀರಿ ಪಂಡಿತ ಸಮುದಾಯದ ಮುಖಂಡರು ಹೇಳಿದ್ದಾರೆ.

ಭಾನುವಾರ ಮುಕ್ತಾಯಗೊಂಡ ಐದು ದಿನಗಳ ಆಚರಣೆಯನ್ನು ಭಕ್ತಿ ಮತ್ತು ಹಬ್ಬದ ಉತ್ಸಾಹದಿಂದ ಆಚರಿಸಲಾಯಿತು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.