ಹೈದರಾಬಾದ್: ಕಾಳೇಶ್ವರಂ ನೀರಾವರಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ವಿಚಾರಣೆ ನಡೆಸುತ್ತಿರುವ ನಡೆಸುತ್ತಿರುವ ನ್ಯಾಯಾಂಗದ ಆಯೋಗದ ಮುಂದೆ ಬುಧವಾರ ಹಾಜರಾದ ಬಿಆರ್‌ಎಸ್ ಅಧ್ಯಕ್ಷ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ವಿಚಾರಣೆ ಎದುರಿಸಿದರು.
ಕಾಳೇಶ್ವರಂ ನೀರಾವರಿ ಯೋಜನೆಯ ಅವ್ಯವಹಾರಗಳ ತನಿಖೆಗೆ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಪಿ.ಸಿ.ಘೋಷ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಲಾಗಿದೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಆಯೋಗದ ಕಚೇರಿಗೆ ಬಂದ ಚಂದ್ರಶೇಖರ ರಾವ್, ಮಧ್ಯಾಹ್ನ 1ಗಂಟೆಯವರೆಗೆ ವಿಚಾರಣೆ ಎದುರಿಸಿದರು. ಆಯೋಗವು ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ಕೆಲವು ಅಧಿಕಾರಿಗಳು, ಎಂಜಿನಿಯರ್‌ಗಳನ್ನು ವಿಚಾರಣೆಗೆ ಒಳಪಡಿಸಿದೆ.
‘ಕೆಸಿಆರ್‘ ವಿಚಾರಣೆಗೆ ಹಾಜರಾಗುವ ಕಾರಣದಿಂದ ಇಲ್ಲಿನ ಬಿಆರ್‌ಎಸ್ ಭವನದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಜಮಾಯಿಸಿದ್ದರು. ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
ಹಿಂದಿನ ಬಿಆರ್‌ಎಸ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಕೆಸಿಆರ್ ಸಂಬಂಧಿ, ಟಿ.ಹರೀಶ್ ರಾವ್ ಹಾಗೂ ಹಣಕಾಸು ಸಚಿವರಾಗಿದ್ದ ಇ. ರಾಜೇಂದರ್ ಕಳೆದ ವಾರ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
‘ತೆಲಂಗಾಣದ ಕಾಂಗ್ರೆಸ್ ಸರ್ಕಾರವು ರಾಜಕೀಯ ದುರುದ್ದೇಶದಿಂದ ಆಯೋಗದ ಮುಂದೆ ಹಾಜರಾಗುವಂತೆ ತಂದೆಗೆ ನೋಟಿಸ್ ಜಾರಿಗೊಳಿಸಿದೆ. ಅಂತಿಮವಾಗಿ ಸತ್ಯಕ್ಕೆ ಜಯ ಲಭಿಸುತ್ತದೆ’ ಎಂದು ಕೆಸಿಆರ್ ಅವರ ಪುತ್ರ, ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಹೇಳಿದರು.
ಕಾಳೇಶ್ವರಂ ನೀರಾವರಿ ಯೋಜನೆ ಅವ್ಯವಹಾರ ಪ್ರಕರಣವು 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಮುಖ ಚರ್ಚಾ ವಿಷಯ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.