ADVERTISEMENT

Kedarnath Helicopter Crash: ಖಾಸಗಿ ಹೆಲಿಕಾಪ್ಟರ್ ಸಂಸ್ಥೆಯ ವಿರುದ್ಧ ಪ್ರಕರಣ

ಪಿಟಿಐ
Published 16 ಜೂನ್ 2025, 9:47 IST
Last Updated 16 ಜೂನ್ 2025, 9:47 IST
   

ಡೆಹರಾಡೂನ್: ಕೇದಾರನಾಥದಿಂದ ಗುಪ್ತಕಾಶಿಗೆ ಹೊರಟಿದ್ದ ಹೆಲಿಕಾಪ್ಟರ್ ಗೌರಿಕುಂಡ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಪತನಗೊಂಡಿತ್ತು. ಅವಘಡದಲ್ಲಿ ಪೈಲಟ್‌, ಮಗು ಸೇರಿ ಏಳು ಮಂದಿ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಹೆಲಿಕಾಪ್ಟರ್ ಸೇವಾ ನಿರ್ವಹಣಾ ಸಂಸ್ಥೆ ಆರ್ಯನ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್ ವಿರುದ್ಧ ನಿರ್ಲಕ್ಷ್ಯದ ಆರೋಪದ ಮೇಲೆ ಸೋಮವಾರ ಪ್ರಕರಣ ದಾಖಲಿಸಲಾಗಿದೆ.

‘ಆರ್ಯನ್‌ ಏವಿಯೇಷನ್‌’ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ ‘ಬೆಲ್‌ 407’ ಹೆಲಿಕಾಪ್ಟರ್ ಗೌರಿಕುಂಡ ಮತ್ತು ತ್ರಿಯುಗಿ ನಾರಾಯಣ ನಡುವೆ ಪತನಗೊಂಡಿತ್ತು. ಪ್ರತಿಕೂಲ ಹವಾಮಾನ ಅವಘಡಕ್ಕೆ ಕಾರಣ ಎಂದು ಹೇಳಲಾಗಿತ್ತು.

ಆರ್ಯನ್ ಏವಿಯೇಷನ್‌ನ ಹೊಣೆಗಾರ ಅಧಿಕಾರಿ ಕೌಶಿಕ್ ಪಾಠಕ್ ಮತ್ತು ವ್ಯವಸ್ಥಾಪಕ ವಿಕಾಸ್ ತೋಮರ್ ವಿರುದ್ಧ ಸೋನಪ್ರಯಾಗ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಮತ್ತು ವಿಮಾನ ಕಾಯ್ದೆ 1934ರ ಸೆಕ್ಷನ್ 10ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜೀವ್ ನಖೋಲಿಯಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಜೂನ್ 15 ರಂದು ಆರ್ಯನ್ ಏವಿಯೇಷನ್‌ಗೆ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಲು ಬೆಳಿಗ್ಗೆ 6 ರಿಂದ ಬೆಳಿಗ್ಗೆ 7 ರವರೆಗೆ ಅವಕಾಶ ನೀಡಲಾಗಿತ್ತು. ಆದರೆ ಈ ಅಪಘಾತ ಅದಕ್ಕೂ ಮೊದಲು (ಬೆಳಿಗ್ಗೆ 5:30) ಸಂಭವಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಬೆಳಿಗ್ಗೆಯಿಂದ ಮಂಜು ಹಾಗೂ ಮೋಡ ಕವಿದ ವಾತಾವರಣವಿದ್ದರೂ ಕೂಡ, ಹೆಲಿಕಾಪ್ಟರ್ ಹಾರಾಟಕ್ಕೂ ಮುನ್ನ ಹವಾಮಾನ ಪರಿಸ್ಥಿತಿಯನ್ನು ಪರಿಶೀಲಿಸಲಾಗಿಲ್ಲ. ಅಲ್ಲದೇ ಡಿಜಿಸಿಎ (ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ) ಮತ್ತು ಯುಸಿಎಡಿಎಗೆ (ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ) ಹೊರಡಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (ಎಸ್‌ಒಪಿ) ನಿರ್ಲಕ್ಷಿಸಲಾಗಿದೆ. ಇಂತಹ ಕ್ರಮಗಳು ಜೀವ ಮತ್ತು ಆಸ್ತಿಪಾಸ್ತಿಗಳ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಕಂಪನಿಯ ವ್ಯವಸ್ಥಾಪಕರಿಗೆ ಚೆನ್ನಾಗಿ ತಿಳಿದಿತ್ತು. ಆದರೂ ಆರ್ಯನ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕರು ತಮ್ಮ ಜವಾಬ್ದಾರಿಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ, ಇದರಿಂದಾಗಿ ಅಪಘಾತ ಸಂಭವಿಸಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.