ADVERTISEMENT

ಚಿನ್ನದ ಬೆಲೆ ಗಗನಕ್ಕೆ: ಮದುವೆಗೆ ಮೂರೇ ಆಭರಣ ಧರಿಸಲು ಪಂಚಾಯಿತಿ ಆದೇಶ!

ಪಿಟಿಐ
Published 30 ಅಕ್ಟೋಬರ್ 2025, 5:09 IST
Last Updated 30 ಅಕ್ಟೋಬರ್ 2025, 5:09 IST
<div class="paragraphs"><p>ಪ್ರಾತಿನಿಧಿಕ ಚಿತ್ರ(ಮೆಟಾ ಎಐ)</p></div>

ಪ್ರಾತಿನಿಧಿಕ ಚಿತ್ರ(ಮೆಟಾ ಎಐ)

   

ಡೆಹ್ರಾಡೂನ್‌ (ಉತ್ತರಾಖಂಡ): ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೆ ಮಹಿಳೆಯರು ಮೂರಕ್ಕಿಂತ ಹೆಚ್ಚು ಚಿನ್ನದ ಆಭರಣಗಳನ್ನು ಧರಿಸುವುದನ್ನು ನಿರ್ಬಂಧಿಸಿ ಜಿಲ್ಲೆಯ ಕಂಧಾರ್ ಮತ್ತು ಇಂದ್ರಾಣಿ ಗ್ರಾಮಗಳ ಸ್ಥಳೀಯ ಪಂಚಾಯತ್‌ಗಳು ಆದೇಶ ಹೊರಡಿಸಿವೆ.

ಆದೇಶದ ಪ್ರಕಾರ, ಮದುವೆಗಳಲ್ಲಿ ಮಹಿಳೆಯರು ಮೂಗುತಿ, ಕಿವಿಯೋಲೆ ಮತ್ತು ಮಂಗಳಸೂತ್ರವನ್ನು ಮಾತ್ರ ಧರಿಸಲು ಅವಕಾಶವಿರುತ್ತದೆ. ನಿಯಮ ಉಲ್ಲಂಘಿಸಿದ್ದಲ್ಲಿ ₹50 ಸಾವಿರ ದಂಡ ವಿಧಿಸಲಾಗುತ್ತದೆ.

ADVERTISEMENT

‘ಒಂದೆಡೆ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಮತ್ತೊಂದೆಡೆ ಸಂಪತ್ತನ್ನು ಪ್ರದರ್ಶಿಸುವ ಸಾಮಾಜಿಕ ಒತ್ತಡಕ್ಕೆ ಮಹಿಳೆಯರು ಒಳಗಾಗುತ್ತಿದ್ದಾರೆ. ಇದು ಕೌಟುಂಬಿಕ ಸಂಘರ್ಷಗಳು ಮತ್ತು ಆರ್ಥಿಕ ಒತ್ತಡಕ್ಕೆ ಕಾರಣವಾಗುತ್ತದೆ. ಈ ಅಸಮಾನತೆಯನ್ನು ಕಡಿಮೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ’ ಎಂದು ಕಂಧಾರ್ ಗ್ರಾಮದ ಮುಖಂಡ ಅರ್ಜುನ್ ಸಿಂಗ್ ತಿಳಿಸಿದ್ದಾರೆ.

ಪಂಚಾಯತ್ ನಿರ್ಧಾರವನ್ನು ಸ್ವಾಗತಿಸಿರುವ ಮಹಿಳೆಯರು, ನಿಯಮದಲ್ಲಿನ ಅಸಮಾನತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಸಮಾನತೆ ಸಾಧಿಸಬೇಕಾದರೆ ಮಹಿಳೆಯರು ಆಭರಣ ನಿಷೇಧಿಸುವ ಹಾಗೆ ಪುರುಷರು ದುಬಾರಿ ಮದ್ಯ ಸೇವಿಸುವುದನ್ನು ನಿಷೇಧಿಸಬೇಕು. ಚಿನ್ನವು ಒಂದು ಹೂಡಿಕೆಯಾಗಿದ್ದು, ಕಷ್ಟದ ಸಮಯದಲ್ಲಿ ಉಪಯುಕ್ತವಾಗಿದೆ. ಮದ್ಯ ಕುಡಿಯುವುದರಿಂದ ಏನು ಲಾಭ?’ ಎಂದು ಜೌನ್ಸಾರ್ ನಿವಾಸಿ ಅಮಲಾ ಚೌಹಾಣ್ ಪ್ರಶ್ನಿಸಿದ್ದಾರೆ.

‘ಈಗೀಗ ಮದುವೆ ಮನೆಗಳಲ್ಲಿ ದುಬಾರಿ ಮದ್ಯ ಮತ್ತು ಉಡುಗೊರೆಗಳ ಪ್ರದರ್ಶನ ಹೆಚ್ಚಾಗುತ್ತಿದೆ. ಖರ್ಚು ಕಡಿಮೆ ಮಾಡುವ ಬಗ್ಗೆ ನಾವು ಮಾತನಾಡುವುದಾದರೆ ಸಮಾರಂಭಗಳಲ್ಲಿ ಮದ್ಯ ಮತ್ತು ಮಾಂಸವನ್ನು ನಿಷೇಧಿಸಬೇಕು’ ಎಂದು ನಿಶಾ ರಾವುತ್ ಹೇಳಿದ್ದಾರೆ.

‘ಆಭರಣಗಳ ಮೇಲಿನ ನಿಷೇಧ ಸ್ವಾಗತಾರ್ಹ. ಆದರೆ, ಮದ್ಯ ಮತ್ತು ಇತರ ಖರ್ಚುಗಳನ್ನು ಕಡಿಮೆ ಮಾಡಬೇಕೆಂಬ ಮಹಿಳೆಯರ ಬೇಡಿಕೆಯೂ ಸಹ ಮಾನ್ಯವಾಗಿದೆ. ಪಂಚಾಯತ್ ಇದನ್ನು ಸಹ ಪರಿಗಣಿಸಬೇಕು’ ಎಂದು ಭೀಮ್ ಸಿಂಗ್ ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ.

‘ಬುಡಕಟ್ಟು ಸಮುದಾಯದವರು ಹೆಚ್ಚಿರುವ ಜೌನ್ಸಾರ್‌ ಪ್ರದೇಶದಲ್ಲಿ ಹೆಚ್ಚಿನವರು ಬಡವರಾಗಿದ್ದಾರೆ. ಪಂಚಾಯತ್ ನಿರ್ಧಾರ ಸ್ವಾಗತಾರ್ಹ’ ಎಂದು 80 ವರ್ಷದ ಮಹಿಳೆ ಊಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.