
ನವದೆಹಲಿ: ರಾಷ್ಟ್ರೀಯ ಪ್ರಶಸ್ತಿ ವಿಜೇತ ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರನ್ನು ಯುನಿಸೆಫ್ ಇಂಡಿಯಾದ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪಾತ್ರಗಳ ಮೂಲಕ ಹೆಸರುವಾಸಿಯಾದ ಕೀರ್ತಿ ಸುರೇಶ್, ದುರ್ಬಲ ಮಕ್ಕಳಿಗಾಗಿ ಯುನಿಸೆಫ್‌ನ ಪ್ರಯತ್ನಗಳನ್ನು ಬೆಂಬಲಿಸುವ ವ್ಯಕ್ತಿಗಳ ವಿಶೇಷ ಗುಂಪನ್ನು ಸೇರಿದ್ದಾರೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
ಮಾನಸಿಕ ಆರೋಗ್ಯ, ಶಿಕ್ಷಣ ಮತ್ತು ಲಿಂಗ ಸಮಾನತೆಯಂತಹ ಪ್ರಮುಖ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕೀರ್ತಿ ಸುರೇಶ್ ಮಾಡಲಿದ್ದಾರೆ.
‘ಖ್ಯಾತ ನಟಿ ಕೀರ್ತಿ ಸುರೇಶ್ ಅವರೊಂದಿಗೆ ಒಡಂಬಂಡಿಕೆ ಮಾಡಿಕೊಳ್ಳಲು ಯುನಿಸೆಫ್ ಇಂಡಿಯಾ ಹರ್ಷಿಸುತ್ತದೆ. ಪ್ರೇಕ್ಷಕರ ಮೇಲೆ ಅವರ ಆಳವಾದ ಪ್ರಭಾವವು ಮಕ್ಕಳ ಹಕ್ಕುಗಳು ಮತ್ತು ಯೋಗಕ್ಷೇಮಕ್ಕಾಗಿ ಹೋರಾಡಲು ಪ್ರಬಲ ಮತ್ತು ಸ್ಪೂರ್ತಿದಾಯಕ ವೇದಿಕೆಯನ್ನು ಒದಗಿಸುತ್ತದೆ’ಎಂದು ಯುನಿಸೆಫ್ ಇಂಡಿಯಾದ ಪ್ರತಿನಿಧಿ ಸಿಂಥಿಯಾ ಮೆಕ್‌ಕ್ಯಾಫ್ರಿ ಹೇಳಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೀರ್ತಿ ಸುರೇಶ್, ಇದು ನನಗೆ ಸಿಕ್ಕ ಒಂದು ದೊಡ್ಡ ಗೌರವವಾಗಿದೆ ಎಂದಿದ್ದಾರೆ.
‘ಮಕ್ಕಳು ನಮ್ಮ ಅತಿದೊಡ್ಡ ಜವಾಬ್ದಾರಿ ಮತ್ತು ನಂಬಿಕೆ. ಪೋಷಣೆ, ಪ್ರೀತಿಯ ಆರೈಕೆಯು ಮಕ್ಕಳು ಸಂತೋಷದ, ಆರೋಗ್ಯಕರ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಅಗತ್ಯವಿರುವ ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅಡಿಪಾಯವನ್ನು ನಿರ್ಮಿಸುತ್ತದೆ’ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.