ADVERTISEMENT

ಅಮಿತ್‌ ಶಾ ಹೇಳಿಕೆಗೆ ಪ್ರತಿಯಾಗಿ ‘ಅಂಬೇಡ್ಕರ್’ ವಿದ್ಯಾರ್ಥಿವೇತನ ಘೋಷಿಸಿದ ಎಎಪಿ

ದೆಹಲಿಯ ದಲಿತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉಚಿತ ಶಿಕ್ಷಣ ಪಡೆಯಲು ಅವಕಾಶ

ಪಿಟಿಐ
Published 21 ಡಿಸೆಂಬರ್ 2024, 10:43 IST
Last Updated 21 ಡಿಸೆಂಬರ್ 2024, 10:43 IST
   

ನವದೆಹಲಿ: ಅಂಬೇಡ್ಕರ್ ಕುರಿತ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿಯಾಗಿ ‘ಅಂಬೇಡ್ಕರ್ ಸಮ್ಮಾನ್ ವಿದ್ಯಾರ್ಥಿವೇತನ’ ಯೋಜನೆ ಘೋಷಿಸಿರುವ ಆಮ್‌ ಆದ್ಮಿ ಪಕ್ಷ(ಎಎಪಿ), ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ದೆಹಲಿಯ ದಲಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯಲು ಈ ಯೋಜನೆಯಡಿ ಅವಕಾಶ ಕಲ್ಪಿಸಿದೆ.

‘ಅಂಬೇಡ್ಕರ್ ಸಮ್ಮಾನ್ ವಿದ್ಯಾರ್ಥಿವೇತನ’ ಯೋಜನೆಯಡಿ ದಲಿತ ವಿದ್ಯಾರ್ಥಿಗಳಿಗೆ ಉಚಿತ ವಿದೇಶಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಈ ಯೋಜನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸತ್ತಿನಲ್ಲಿ ಅಂಬೇಡ್ಕರ್ ಅವರಿಗೆ ಬಿಜೆಪಿ ಅವಮಾನ ಮಾಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಈ ಯೋಜನೆಯನ್ನು ಘೋಷಿಸಲಾಗಿದೆ’ ಎಂದಿದ್ದಾರೆ.

ADVERTISEMENT

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್‌ನಲ್ಲಿ ಅಂಬೇಡ್ಕರ್‌ ಅವರನ್ನು ಅಪಹಾಸ್ಯ ಮಾಡುವ ಮೂಲಕ ಅವಮಾನಿಸಿದ್ದಾರೆ. ಅಂಬೇಡ್ಕರ್ ಅವರನ್ನು ಪ್ರೀತಿಸುವ ಕೋಟ್ಯಾಂತರ ಜನರಿಗೆ ಇದರಿಂದ ನೋವುಂಟಾಗಿದೆ’ ಎಂದು ಹೇಳಿದ್ದಾರೆ.

‘ಶಿಕ್ಷಣವು ಭವಿಷ್ಯದ ಹಾದಿ ಎಂದು ಹೇಳಿದ್ದ ಅಂಬೇಡ್ಕರ್ ಅವರು ಎಲ್ಲಾ ವೈರುಧ್ಯಗಳನ್ನು ಮೆಟ್ಟಿ ಅಮೆರಿಕದಲ್ಲಿ ಪಿಎಚ್‌ಡಿ ಪಡೆದಿದ್ದರು’ ಎಂದು ಇದೇ ವೇಳೆ ನೆನಸಿಕೊಂಡಿದ್ದಾರೆ.

ಈ ವಿದ್ಯಾರ್ಥಿವೇತನವು ಸಂವಿಧಾನ ಶಿಲ್ಪಿಗೆ ಬಿಜೆಪಿ ಮಾಡಿದ ಅವಮಾನಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಈ ಯೋಜನೆಯಡಿಯಲ್ಲಿ ದೆಹಲಿಯ ಯಾವುದೇ ದಲಿತ ವಿದ್ಯಾರ್ಥಿಯು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂತಹ ಯಾವುದೇ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಯ ಶಿಕ್ಷಣ, ಪ್ರಯಾಣ ಮತ್ತು ವಸತಿ ವೆಚ್ಚವನ್ನು ದೆಹಲಿ ಸರ್ಕಾರ ಭರಿಸಲಿದೆ’ ಎಂದು ಯೋಜನೆಗೆ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಸರ್ಕಾರಿ ನೌಕರರ ಮಕ್ಕಳು ಕೂಡ ಈ ಯೋಜನೆಯಡಿ ಅರ್ಹತೆ ಪಡೆಯಲಿದ್ದಾರೆ’ ಎಂದು ತಿಳಿಸಿದ ಅವರು, ಯೋಜನೆ ಹೇಗೆ ಮತ್ತು ಯಾವಾಗ ಕಾರ್ಯರೂಪಕ್ಕೆ ಬರಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.