
ನವದೆಹಲಿ: ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿರುವುದನ್ನು ಪರಿಗಣಿಸಿ ಗಾಳಿ ಮತ್ತು ನೀರು ಶುದ್ಧೀಕರಣ ಯಂತ್ರಗಳ ಮೇಲೆ ವಿಧಿಸಲಾಗುತ್ತಿರುವ ಶೇ 18ರಷ್ಟು ಜಿಎಸ್‌ಟಿಯನ್ನು ತೆಗೆದುಹಾಕುವಂತೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶುದ್ಧ ಗಾಳಿ ಮತ್ತು ಶುದ್ಧ ನೀರು ಎಲ್ಲ ನಾಗರಿಕರ ಮೂಲಭೂತ ಹಕ್ಕುಗಳು ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಪ್ರತಿಪಾದಿಸಿದ್ದಾರೆ.
‘ದೆಹಲಿ ಮತ್ತು ಉತ್ತರ ಭಾರತದಾದ್ಯಂತ ಗಾಳಿ ಗುಣಮಟ್ಟ ಮಾರಣಾಂತಿಕವಾಗಿದೆ. ಈ ಸಮಸ್ಯೆಗೆ ಪರಿಹಾರ ನೀಡುವ ಬದಲು ಕೇಂದ್ರ ಸರ್ಕಾರವು ಅಧಿಕ ತೆರಿಗೆ ಸಂಗ್ರಹಿಸುವತ್ತ ನಿರತವಾಗಿದೆ’ ಎಂದು ಅವರು ಕಿಡಿಕಾರಿದ್ದಾರೆ.
ಮಾಲಿನ್ಯದಿಂದ ತಮ್ಮ ಕುಟುಂಬಗಳನ್ನು ರಕ್ಷಿಸಲು ಜನರು ಗಾಳಿ ಶುದ್ಧೀಕರಣ ಯಂತ್ರಗಳನ್ನು ಖರೀದಿಸಲು ಹೋದಾಗ, ಸರ್ಕಾರವು ಅವರ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸುತ್ತಿದೆ. ಇದು ಸಂಪೂರ್ಣ ಅನ್ಯಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ;
ಗಾಳಿ ಮತ್ತು ನೀರು ಶುದ್ಧೀಕರಣ ಯಂತ್ರಗಳ ಮೇಲೆ ವಿಧಿಸಲಾಗುತ್ತಿರುವ ಜಿಎಸ್‌ಟಿಯನ್ನು ಕೇಂದ್ರವು ತಕ್ಷಣ ತೆಗೆದುಹಾಕಬೇಕೆಂದು ಎಎಪಿ ಮುಖ್ಯಸ್ಥ ಒತ್ತಾಯಿಸಿದ್ದಾರೆ. ನಿಮಗೆ ಕಲುಷಿತ ಗಾಳಿಯಿಂದ ಪರಿಹಾರ ಒದಗಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಜನರ ಜೇಬಿನ ಮೇಲೆ ಹೊರೆ ಹಾಕುವುದನ್ನು ನಿಲ್ಲಿಸಿ ಎಂದು ಅವರು ಹೇಳಿದ್ದಾರೆ.
ಮುನ್ಸೂಚನೆಯ ಪ್ರಕಾರ, ಮುಂಬರುವ ವಾರದಲ್ಲೂ ದೆಹಲಿಯ ಗಾಳಿ ಗುಣಮಟ್ಟ 'ತುಂಬಾ ಕಳಪೆ'ಯಾಗಿಯೇ ಉಳಿಯುವ ಸಾಧ್ಯತೆಯಿದೆ.
ಈ ಚಳಿಗಾಲದಲ್ಲಿ ದೆಹಲಿಯ ಗಾಳಿಯ ಗುಣಮಟ್ಟ 'ತುಂಬಾ ಕಳಪೆ' ಮತ್ತು 'ತೀವ್ರ ಕಳಪೆ' ಮಟ್ಟಕ್ಕೆ ಇಳಿಯುತ್ತಿರುವುದರಿಂದ, ಮಾಲಿನ್ಯ ಸಂಬಂಧಿತ ಆರೋಗ್ಯ ಸಮಸ್ಯೆಯ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಲು ನಿಯಮಿತ ರೋಗನಿರ್ಣಯ ತಪಾಸಣೆಯ ಅಗತ್ಯವನ್ನು ವೈದ್ಯರು ಒತ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.