ADVERTISEMENT

ನೀರಿನ ದುಬಾರಿ ಬಿಲ್‌ ಮನ್ನಾ: ಕೇಜ್ರಿವಾಲ್ ಭರವಸೆ

ಎಎಪಿ ನಾಯಕನ ವಿರುದ್ಧ ಗೃಹ ಸಚಿವ ಶಾ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 13:56 IST
Last Updated 4 ಜನವರಿ 2025, 13:56 IST
ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು –ಪಿಟಿಐ ಚಿತ್ರ
ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಎಎಪಿ ಮತ್ತೆ ಅಧಿಕಾರಕ್ಕೆ ಬಂದರೆ ‘ದುಬಾರಿ’ ನೀರಿನ ಬಿಲ್‌ ಮನ್ನಾ ಮಾಡಲಾಗುತ್ತದೆ ಎಂದು ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಶನಿವಾರ ಭರವಸೆ ನೀಡಿದರು.

ದೆಹಲಿ ಜಲ ಮಂಡಳಿಯು ಸಾವಿರ, ಲಕ್ಷಗಳ ಮೊತ್ತದ ನೀರಿನ ಬಿಲ್ ಕಳುಹಿಸಿದ್ದನ್ನು ನೋಡಿ ಜನ ಸಂಕಟಪಡುತ್ತಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ತಾವು ಜೈಲಿಗೆ ಹೋದ ನಂತರದಲ್ಲಿ ಈ ರೀತಿಯ ಬಿಲ್‌ಗಳು ಬರುವುದು ಆರಂಭವಾಯಿತು ಎಂದ ಅವರು, ಆ ಬಿಲ್‌ ಶುಲ್ಕವನ್ನು ಪಾವತಿಸಬಾರದು ಎಂದು ಜನರನ್ನು ಒತ್ತಾಯಿಸಿದರು.

ಎಎಪಿ ನೇತೃತ್ವದ ಸರ್ಕಾರವು ಪ್ರತಿ ತಿಂಗಳಿಗೆ 20 ಸಾವಿರ ಲೀಟರ್ ನೀರನ್ನು ಉಚಿತವಾಗಿ ನೀಡುತ್ತಿದೆ. ದೆಹಲಿಯಲ್ಲಿ 12 ಲಕ್ಷ ಕುಟುಂಬಗಳಿಗೆ ಈ ಯೋಜನೆಯಿಂದ ಪ್ರಯೋಜನ ಆಗಿದೆ ಎಂದು ಕೇಜ್ರಿವಾಲ್ ಹೇಳಿದರು.

ADVERTISEMENT

ಅಮಿತ್ ಶಾ ವಾಗ್ದಾಳಿ

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮೂಲಸೌಕರ್ಯ ನಿರ್ಮಿಸುವ ಬದಲು ಕೇಜ್ರಿವಾಲ್ ಅವರು ತಮಗಾಗಿ ‘ಶೀಷ ಮಹಲ್’ ನಿರ್ಮಿಸಿಕೊಂಡರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.

ಹೀಗೆ ಮಾಡಿದ್ದಕ್ಕೆ ಕೇಜ್ರಿವಾಲ್ ಅವರು ಲೆಕ್ಕ ಕೊಡಬೇಕಾಗುತ್ತದೆ ಎಂದು ಶಾ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದರು. ಕೇಜ್ರಿವಾಲ್ ಅವರು ರಾಜಕೀಯಕ್ಕೆ ಬಂದಾಗ ಸರ್ಕಾರಿ ಕಾರು, ಬಂಗಲೆ ಬಳಸುವುದಿಲ್ಲ ಎಂದಿದ್ದರು. ಆದರೆ, ₹45 ಕೋಟಿ ವೆಚ್ಚದಲ್ಲಿ 50 ಸಾವಿರ ಚದರ ಯಾರ್ಡ್‌ ವಿಸ್ತೀರ್ಣದ ಶೀಷ ಮಹಲ್ ನಿರ್ಮಿಸಿಕೊಂಡರು ಎಂದು ಟೀಕಿಸಿದರು.

ಹಣಕಾಸಿನ ನಿರ್ವಹಣೆ ಸರಿಯಿಲ್ಲ: ಬಿಜೆಪಿ

ನವದೆಹಲಿ (ಪಿಟಿಐ): ಎಎಪಿ ನೇತೃತ್ವದ ದೆಹಲಿ ಸರ್ಕಾರವು ವಿವಿಧ ವಲಯಗಳಲ್ಲಿ ಸೃಷ್ಟಿಸಿರುವ ಬಿಕ್ಕಟ್ಟನ್ನು ಪ್ರತಿದಿನವೂ ಎತ್ತಿತೋರಿಸುವುದಾಗಿ ಹೇಳಿರುವ ಬಿಜೆಪಿ ದೆಹಲಿ ಸರ್ಕಾರದಲ್ಲಿ ಹಣಕಾಸಿನ ನಿರ್ವಹಣೆ ಸರಿಯಾಗಿ ನಡೆದಿಲ್ಲ ಎಂದು ದೂರಿದೆ. ದೆಹಲಿಯು ಹಣಕಾಸಿನ ಆರೋಗ್ಯದ ದೃಷ್ಟಿಯಿಂದ ಉತ್ತಮ ಸ್ಥಾನದಲ್ಲಿತ್ತು. ಆದರೆ ಎಎಪಿ ನೇತೃತ್ವದಲ್ಲಿ ಸ್ಥಿತಿ ಹದಗೆಟ್ಟಿದೆ. 2015–16ರಲ್ಲಿ ಶೇಕಡ 1.56ರಷ್ಟು ಮಿಗತೆ ಬಜೆಟ್ ಹೊಂದಿತ್ತು. ಮಿಗತೆ ಪ್ರಮಾಣ ನಂತರ ಕಡಿಮೆ ಆಗುತ್ತಿದ್ದು ರಾಜ್ಯವು ಕೊರತೆ ಬಜೆಟ್ ಮಂಡಿಸುವ ಹಂತದಲ್ಲಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಹೇಳಿದರು. ಸರ್ಕಾರವು ಹೆಚ್ಚೆಚ್ಚು ಸಾಲ ಮಾಡುತ್ತಿದೆ. ಈಗ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ ₹10 ಸಾವಿರ ಕೋಟಿ ಸಾಲ ಪಡೆಯುವ ಪ್ರಸ್ತಾವ ಹೊಂದಿದೆ ಎಂದರು. ದೆಹಲಿಯ ಖಜಾನೆಯ ಲೂಟಿಯಲ್ಲಿ ಮತ್ತು ಅದನ್ನು ಬರಿದಾಗಿಸುವಲ್ಲಿ ಕೇಜ್ರಿವಾಲ್ ಅವರು ದಾಖಲೆ ನಿರ್ಮಿಸಿದ್ದಾರೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.