ADVERTISEMENT

ಟ್ರಂಪ್‌ ಪತ್ನಿ ದೆಹಲಿ ಶಾಲೆ ಭೇಟಿ: ಸಿಎಂ ಕೇಜ್ರಿವಾಲ್‌, ಡಿಸಿಎಂಗೇ ಇಲ್ಲ ಆಮಂತ್ರಣ

ಪಿಟಿಐ
Published 22 ಫೆಬ್ರುವರಿ 2020, 10:46 IST
Last Updated 22 ಫೆಬ್ರುವರಿ 2020, 10:46 IST
   

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಇದೇ ಫೆ. 25ರಂದು ದಕ್ಷಿಣ ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡುತ್ತಿದ್ದು, ಅಲ್ಲಿನ ಸಂತೋಷ ಪಠ್ಯಕ್ರಮ (ಹ್ಯಾಪಿನೆಸ್‌ ಕರಿಕ್ಯುಲಮ್‌) ತರಗತಿಯನ್ನು ಖುದ್ದು ವೀಕ್ಷಿಸಲಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರಿಗೆ ಆಹ್ವಾನ ನೀಡಿಲ್ಲ ಎಂಬುದು ತಿಳಿದು ಬಂದಿದೆ.

ಎರಡು ದಿನಗಳ ಭೇಟಿಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪತ್ನಿ ಮೆಲಾನಿಯಾ ಟ್ರಂಪ್‌ ಇದೇ 24ರಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಎರಡು ದಿನಗಳಲ್ಲಿ ಟ್ರಂಪ್‌ ದಂಪತಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಮೆಲಾನಿಯಾ ಟ್ರಂಪ್‌ ಅವರು ಫೆ.25ರ ಮಂಗಳವಾರ ದಕ್ಷಿಣ ದೆಹಲಿ ಸರ್ಕಾರ ಶಾಲೆಯೊಂದಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಸಂತೋಷ ಪಠ್ಯಕ್ರಮ (ಹ್ಯಾಪಿನೆಸ್‌ ಕರಿಕ್ಯುಲಮ್‌) ತರಗತಿಯನ್ನು ವೀಕ್ಷಿಸಲಿದ್ದಾರೆ.

ADVERTISEMENT

ಆಪ್‌ ಸರ್ಕಾರ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಪರಿಚಯಿಸಿರುವ ‘ಸಂತೋಷ ಪಠ್ಯಕ್ರಮ’ದ ಬಗ್ಗೆ ವಿವರಿಸಲು ಮುಖ್ಯಮಂತ್ರಿ ಕೇಜ್ರಿವಾಲ್‌ ಮತ್ತು ಉಪ ಮುಖ್ಯಮಂತ್ರಿ ಸಿಸೋಡಿಯಾ ಅವರೇ ಮೆಲಾನಿಯಾ ಟ್ರಂಪ್‌ ಅವರನ್ನು ಶಾಲೆಗೆ ಬರಮಾಡಿಕೊಳ್ಳಲಿದ್ದಾರೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಈಗ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನೇ ಈ ಮಹತ್ವದ ಕಾರ್ಯಕ್ರಮದಿಂದ ದೂರವಿಟ್ಟಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

‘ಕೇಂದ್ರ ಸರ್ಕಾರವೇ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದೆ. ಕೇಜ್ರಿವಾಲ್‌ ಮತ್ತು ಸಿಸೋಡಿಯಾ ಅವರಿಗೆ ಆಹ್ವಾನ ಸಿಗದಿರಲು ಕೇಂದ್ರ ಸರ್ಕಾರವೇ ಕಾರಣ,’ ಎಂದು ಆಪ್‌ ದೂರಿದೆ.

ಆಪ್‌ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ, ‘ ಇಂಥ ಮಹತ್ವದ ಬೆಳವಣಿಗೆಯಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದು. ಇಂಥವರನ್ನೇ ಕರೆಯರಿ, ಕರೆಯದಿರಿ ಎಂದು ಕೇಂದ್ರ ಸರ್ಕಾರ ಅಮೆರಿಕ ಸರ್ಕಾರಕ್ಕೇನೂ ಹೇಳಿಲ್ಲ. ನಾನು ನಾನು, ನೀನು ನೀನು ಎಂದು ಇದರಲ್ಲಿ ಕಿತ್ತಾಡಲು ಆಗದು,’ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ಈ ವಿಚಾರದ ಕುರಿತು ಅಮೆರಿಕ ರಾಯಭಾರ ಕಚೇರಿಯನ್ನು ಪ್ರಶ್ನಿಸಲಾಯಿತಾದರೂ, ಈ ವಿಚಾರ ದೆಹಲಿ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಅದು ತಿಳಿಸಿದೆ. ಆದರೆ, ಆಹ್ವಾನ ಸಿಗದೇ ಇರುವುದರ ಬಗ್ಗೆ ದೆಹಲಿ ಸರ್ಕಾರದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.