ADVERTISEMENT

ಕಾನೂನು ಸುವ್ಯವಸ್ಥೆ ಬಗ್ಗೆ ರಾಜಕೀಯ ಬೇಡ: ಅರವಿಂದ ಕೇಜ್ರಿವಾಲ್ ಕಿಡಿ

ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕಿಡಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 11:40 IST
Last Updated 7 ಡಿಸೆಂಬರ್ 2024, 11:40 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿಯಲ್ಲಿನ ಕಾನೂನು ಸುವ್ಯವಸ್ಥೆ ವಿಷಯವನ್ನು ರಾಜಕೀಯಗೊಳಿಸುವುದರ ಬದಲು, ಜನರ ಸುರಕ್ಷತೆ ಖಾತ್ರಿಪಡಿಸುವತ್ತ ಗಮನಹರಿಸಿ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿದ್ದು, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೇಜ್ರಿವಾಲ್‌ ವಾಗ್ದಾಳಿ ನಡೆಸಿದ್ದಾರೆ.

ಮುಂಜಾನೆ ವಾಯುವಿಹಾರ ಮಾಡುತ್ತಿದ್ದ ಉದ್ಯಮಿಗೆ ಗುಂಡಿಕ್ಕಿ ಹತ್ಯೆ, ಪಂಚಶೀಲ ಎನ್‌ಕ್ಲೇವ್‌ನಲ್ಲಿ ಹಿರಿಯ ನಾಗರಿಕರೊಬ್ಬರ ಕೊಲೆ, ಸುಲಿಗೆಗಾಗಿ ಬೆದರಿಕೆ ಕರೆಗಳು ಹೆಚ್ಚುತ್ತಿರುವುದರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ದೆಹಲಿಯಲ್ಲಿ ಗ್ಯಾಂಗ್‌ ವಾರ್‌ಗಳು ಎಗ್ಗಿಲ್ಲದೆ ನಡೆದಿವೆ. ಎಲ್ಲೆಡೆ ಡ್ರಗ್ಸ್‌ ಮಾರಾಟವಾಗುತ್ತಿದೆ. ಕಾನೂನು ಸುವ್ಯವಸ್ಥೆಯು ಕುಸಿದಿರುವುದರಿಂದ ಜನರು ಭಯಭೀತರಾಗಿದ್ದಾರೆ. ಹಿರಿಯ ನಾಗರಿಕರು ದಿಗಿಲುಗೊಂಡಿದ್ದಾರೆ. ಮಹಿಳೆಯರಲ್ಲಿ ಅಸುರಕ್ಷಿತ ಭಾವನೆ ಮೂಡಿದೆ. ದೆಹಲಿಯ ಪೊಲೀಸರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಕೇಂದ್ರ ಗೃಹ ಸಚಿವರು ಎಲ್ಲಿದ್ದಾರೆ? ಎಂದು ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

‘ಕೆಲವು ಅಪರಾಧಗಳ ಹಿಂದೆ ರೋಹಿಂಗ್ಯಾದವರಿದ್ದಾರೆ’ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಆರೋಪಿಗಳು ರೋಹಿಂಗ್ಯಾ ಸಮುದಾಯದವರಾಗಿದ್ದರೆ, ಕೇಂದ್ರದ ಗೃಹ ಸಚಿವರು ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ಅವರನ್ನು ಏಕೆ ತಡೆಯಲಿಲ್ಲ. ಅವರು ದೆಹಲಿ ಪ್ರವೇಶಿಸಿದ್ದು ಹೇಗೆ? ದೆಹಲಿ ಪೊಲೀಸರು ಏಕೆ ಬಂಧಿಸಲಿಲ್ಲ? ಈ ವಿಷಯದಲ್ಲಿ ರಾಜಕೀಯ ಮಾಡುವ ಬದಲು ಜನರ ಸುರಕ್ಷತೆಗೆ ಒತ್ತು ನೀಡಿ’ ಎಂದು ಅವರು ಹೇಳಿದ್ದಾರೆ.

ಜನರ ಗಮನವನ್ನು ಬೇರೆಡೆ ಸೆಳೆಯಲಿಕ್ಕಾಗಿಯೇ ಬಿಜೆಪಿ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.