ADVERTISEMENT

‘ಟ್ವೆಂಟಿ20’ ಪಕ್ಷದ ವಾರ್ಷಿಕೋತ್ಸವ! ಮೇ 15ಕ್ಕೆ ಕೇಜ್ರಿವಾಲ್‌ ಕೇರಳಕ್ಕೆ

ಐಎಎನ್ಎಸ್
Published 2 ಮೇ 2022, 11:27 IST
Last Updated 2 ಮೇ 2022, 11:27 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌    

ನವದೆಹಲಿ: ‘ಟ್ವೆಂಟಿ20’ ರಾಜಕೀಯ ಪಕ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸಲೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮೇ 15ರಂದು ಕೇರಳಕ್ಕೆ ತೆರಳಲಿದ್ದಾರೆ.

‘ಟ್ವೆಂಟಿ20’ ಅಸಾಂಪ್ರದಾಯಿಕ ರಾಜಕೀಯ ಪಕ್ಷವಾಗಿದ್ದು, ಲಾಭರಹಿತ ದತ್ತಿ ಸಂಸ್ಥೆಯಾಗಿ ಪ್ರಾರಂಭವಾಯಿತು. ಅದರ ವಾರ್ಷಿಕೋತ್ಸವದಲ್ಲಿ ಭಾಗವಹಿಸಲೆಂದು ಮುಖ್ಯ ಅತಿಥಿಯನ್ನಾಗಿ ದೆಹಲಿ ಸಿಎಂ ಅವರನ್ನು ಆಹ್ವಾನಿಸಲಾಗಿದೆ.

ರಾಜಕೀಯ ರಂಗದ ‘ಸ್ಟಾರ್ಟ್‌ ಅಪ್‌’ ರೀತಿ ಕಾರ್ಯನಿರ್ವಹಿಸುತ್ತಿರುವ ಟ್ವೆಂಟಿ20, ಈಗಾಗಲೇ ಕೇರಳದ ಕಿಝಕ್ಕಂಬಲಂ ಗ್ರಾಮ ಪಂಚಾಯಿತಿಯನ್ನು ಗೆಲ್ಲುವ ಮೂಲಕ ಛಾಪು ಮೂಡಿಸಿದೆ. ಪ್ರಸ್ತುತ, ಟ್ವೆಂಟಿ20ಯು ಕಿಝಕ್ಕಂಬಲಂ ಗ್ರಾಮ ಪಂಚಾಯಿತಿಯ ಸುತ್ತಲ ನಾಲ್ಕು ಪಂಚಾಯಿತಿಗಳಲ್ಲಿ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.

ADVERTISEMENT

‘ನಮ್ಮ ಆಹ್ವಾನವನ್ನು ಸೌಜನ್ಯದಿಂದ ಸ್ವೀಕರಿಸಿದ್ದಕ್ಕಾಗಿ ನಾನು ಅರವಿಂದ್ ಕೇಜ್ರಿವಾಲ್ ಅವರಿಗೆ ಆಭಾರಿಯಾಗಿದ್ದೇನೆ. ಎಎಪಿಯಂತೆ ಟ್ವೆಂಟಿ20ಯೂ ಭಾರತೀಯ ರಾಜಕೀಯ ವ್ಯವಸ್ಥೆಯನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸುವ ಬಗ್ಗೆ ವಿಶ್ವಾಸವಿರಿಸಿದೆ. ಅಭಿವೃದ್ಧಿ ಸಾಧಿಸುವ ವಿಚಾರದಲ್ಲಿ ಮತ್ತು ಚುನಾವಣಾ ಯಶಸ್ಸನ್ನು ಗಳಿಸುವ ವಿಚಾರದಲ್ಲಿ ನಮ್ಮಂತಹ ಪಕ್ಷಗಳಿಗೆ ಎಎಪಿ ಮಾರ್ಗದರ್ಶನ ನೀಡಿದೆ’ ಎಂದು ಟ್ವೆಂಟಿ20 ಸಂಸ್ಥಾಪಕ ಸಾಬು ಜೇಕಬ್ ಹೇಳಿದ್ದಾರೆ.

‘ದೆಹಲಿ ಮತ್ತು ಪಂಜಾಬ್ ಎರಡರಲ್ಲಿನ ಎಎಪಿ ಆಡಳಿತ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿದೆ. ಭಾರತೀಯ ರಾಜಕಾರಣಿಗಳಿಗೆ ಎಎಪಿ ಅಧ್ಯಯನಯೋಗ್ಯ’ ಎಂದು ಜೇಕಬ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.