ADVERTISEMENT

Kerala Elections 2021: ಭಾನುವಾರ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಏಜೆನ್ಸೀಸ್
Published 13 ಮಾರ್ಚ್ 2021, 9:55 IST
Last Updated 13 ಮಾರ್ಚ್ 2021, 9:55 IST
ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ
ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ   

ತಿರುವನಂತಪುರ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಲಾಗುವುದು ಎಂದು ಕಾಂಗ್ರೆಸ್ ನೇತಾರ ಹಾಗೂ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ ದೆಹಲಿಯಲ್ಲಿ ಪ್ರಕಟಿಸಲಿದೆ. ನೆಮೊಮ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದನ್ನು ತಿಳಿದುಕೊಳ್ಳಲು ನೀವೆಲ್ಲರೂ ಕಾಯಬೇಕಿದೆ ಎಂದು ಉಮ್ಮನ್ ಚಾಂಡಿ ಸುದ್ದಿಗಾರರಿಗೆ ತಿಳಿಸಿದರು.

ನೆಮೊಮ್ ಕ್ಷೇತ್ರದಿಂದ ನೀವು ಅಖಾಡಕ್ಕಿಳಿಯುತ್ತೀರಾ ಎಂದು ಪ್ರಶ್ನಿಸಿದಾಗ ಅಭ್ಯರ್ಥಿ ಯಾರೆಂಬುದನ್ನು ತಿಳಿಯಲು ಸ್ವಲ್ವ ಕಾಯಿರಿ ಎಂದಷ್ಟೇ ಉತ್ತರಿಸಿದರು.

ADVERTISEMENT

ಒಟ್ಟು 91 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಈ ಪೈಕಿ 81 ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಉಳಿದಿರುವ 10 ಸ್ಥಾನಗಳಲ್ಲಿ ಗೊಂದಲ ಮುಂದುವರಿದಿದೆ.

ಆದರೆ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಅಭ್ಯರ್ಥಿಗಳನ್ನು ಪಕ್ಷವು ಇನ್ನೂ ನಿರ್ಧರಿಸಿಲ್ಲ ಎಂದು ಉಮ್ಮನ್ ಚಾಂಡಿ ಸಮಜಾಯಿಷಿ ನೀಡಿದರು.

ನೆಮೊಮ್ ವಿಧಾನಸಭೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯನ್ನು ನಿರೀಕ್ಷಿಸಲಾಗುತ್ತಿದೆ. 2016ರಲ್ಲಿ ಬಿಜೆಪಿಯ ಹಿರಿಯ ರಾಜಕಾರಣಿ ಓ. ರಾಜಗೋಪಾಲ್ ಗೆಲುವು ದಾಖಲಿಸಿದ್ದರು.

ಏತನ್ಮಧ್ಯೆ ಯುಡಿಎಫ್ ಮೈತ್ರಿಕೂಟದ ಭಾಗವಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಶುಕ್ರವಾರ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿದೆ. ಒಟ್ಟು 27 ಸ್ಥಾನಗಳಲ್ಲಿ ಐಯುಎಂಎಲ್ ಸ್ಪರ್ಧಿಸಲಿದೆ.

ಕೇರಳದಲ್ಲಿ 140 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಏಕ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 2ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.