
ತಿರುವನಂತಪುರ: ಕೇಂದ್ರ ಬಜೆಟ್‌ನಲ್ಲಿ ಕೇರಳ ರಾಜ್ಯವನ್ನು ನಿರ್ಲಕ್ಷಿಸಿರುವ ಕ್ರಮವನ್ನು ಖಂಡಿಸಿ ಫೆಬ್ರುವರಿ 3ರಂದು ‘ಕಪ್ಪು ದಿನ’ವನ್ನು ಆಚರಿಸಲಾಗುವುದು ಎಂದು ಆಡಳಿತಾರೂಢ ಸಿಪಿಎಂ ಸೋಮವಾರ ತಿಳಿಸಿದೆ.
‘ಬಜೆಟ್‌ಗೂ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 29 ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಆದರೆ, ಅವುಗಳಲ್ಲಿ ಯಾವುದನ್ನೂ ಸ್ವೀಕರಿಸಿಲ್ಲ. ಭಾರತದ ಭೂಪಟದಲ್ಲಿ ಕೇರಳ ಅಸ್ತಿತ್ವದಲ್ಲಿಲ್ಲ ಎಂಬಂತೆ ಬಜೆಟ್ ಮಂಡಿಸಲಾಗಿದೆ’ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.
‘ಏಮ್ಸ್ ಬೇಡಿಕೆಯನ್ನು ಕೇಂದ್ರ ಮತ್ತೊಮ್ಮೆ ನಿರ್ಲಕ್ಷಿಸಿದೆ. ಏಳು ಹೈಸ್ಪೀಡ್ ರೈಲು ಕಾರಿಡಾರ್, ಒಳನಾಡು ಜಲ ಸಾರಿಗೆ ಯೋಜನೆಗಳಿಂದಲೂ ರಾಜ್ಯವನ್ನು ಹೊರಗಿಡಲಾಗಿದೆ. ವಿಝಿಂಜಂ ಬಂದರಿಗೆ ಯಾವುದೇ ವಿಶೇಷ ಪ್ಯಾಕೇಜ್‌ಗೆ ಅನುಮೋದನೆ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಫೆಬ್ರುವರಿ 3ರಂದು ಎಲ್ಲ ಬೂತ್‌ಗಳಲ್ಲಿ ಕಪ್ಪು ಧ್ವಜಗಳನ್ನು ಹಾರಿಸಲಾಗುವುದು. ಜನವಿರೋಧಿ ಬಜೆಟ್ ವಿರುದ್ಧ ನಡೆಯುವ ಪ್ರತಿಭಟನೆಗಳಲ್ಲಿ ಸಾರ್ವಜನಿಕರು ಭಾಗವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.