ತಿರುವನಂತಪುರ: ತೀರಾ ಅಪರೂಪ ಹಾಗೂ ಪ್ರಾಣಕ್ಕೆ ಸಂಚಕಾರ ತರುವ ಸೋಂಕು ಎಂದು ಪರಿಗಣಿಸಲಾಗಿರುವ ‘ಮಿದುಳು ತಿನ್ನುವ ಅಮೀಬಾ’ (ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್) ಸೋಂಕಿನ ಪ್ರಕರಣಗಳು ಕೇರಳದಲ್ಲಿ ಹೆಚ್ಚಳ ಕಂಡಿವೆ.
ವರ್ಷಕ್ಕೆ ಒಂದೋ ಎರಡೋ ಪ್ರಕರಣಗಳು ವರದಿಯಾಗುತ್ತಿದ್ದ ರಾಜ್ಯದಲ್ಲಿ, ಪ್ರಸಕ್ತ ವರ್ಷ ಇದುವರೆಗೆ 8 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ.
ಸೋಂಕಿನ ಪ್ರಕರಣಗಳ ಹೆಚ್ಚಳಕ್ಕೆ ಮೂಲ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದಾಗ್ಯೂ, ಅವೈಜ್ಞಾನಿಕ ಕಸ ವಿಲೇವಾರಿಯಿಂದಾಗಿ ಜಲ ಮೂಲಗಳು ಕಲುಷಿತಗೊಳ್ಳುತ್ತಿರುವುದು, ಹವಾಮಾನ ಬದಲಾವಣೆ, ವಲಸೆ ಕಾರ್ಮಿಕರ ಹೆಚ್ಚಳ ಹಾಗೂ ರೋಗ ಪತ್ತೆ ಸೌಲಭ್ಯಗಳ ಉನ್ನತೀಕರಣವನ್ನು ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಮೂಲ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ತುರ್ತಾಗಿ ಸಂಶೋಧನೆ ಕೈಗೊಳ್ಳಬೇಕೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ವಾರ ಇದೇ ಸೋಂಕಿನಿಂದ 9 ವರ್ಷದ ಬಾಲಕಿ ಮೃತಪಟ್ಟಿದ್ದು, ಆಕೆಯ ಇಬ್ಬರು ಸಹೋದರರಿಗೂ ಸೋಂಕು ಹರಡಿರುವ ಗುಣಲಕ್ಷಣಗಳು ವರದಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.