
ತಿರುವನಂತಪುರ: ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ರಾಜ್ಯ ಸಚಿವ ಸಂಪುಟ ಅನುಮೋದಿಸಿದ ಭಾಷಣದ ಎರಡು ಪ್ರಮುಖ ಭಾಗಗಳನ್ನು ಓದಿಲ್ಲ ಎಂದು ಮಂಗಳವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಕೇರಳ ವಿಧಾನಸಭೆಯ ಕಲಾಪ ಆರಂಭವಾಗಿದ್ದು, ರಾಜ್ಯಪಾಲರ ಭಾಷಣದಲ್ಲಿ ನೀತಿ ಭಾಷಣವನ್ನು ಪೂರ್ಣವಾಗಿ ಓದಿಲ್ಲ ಎಂದು ರಾಜ್ಯಪಾಲರ ಭಾಷಣದ ಬಳಿಕ ಪಿಣರಾಯಿ ವಿಜಯನ್ ಆರೋಪಿಸಿದರು.
ರಾಜ್ಯಪಾಲರು ವಿಧಾನಸಭೆಯಲ್ಲಿ ಸರ್ಕಾರ ನೀಡಿದ್ದ ಭಾಷಣದ ಪ್ಯಾರಾಗ್ರಾಫ್ 12ರ ಆರಂಭ ಮತ್ತು ಪ್ಯಾರಾಗ್ರಾಫ್ 15ರ ಕೊನೆಯ ಭಾಗವನ್ನು ಓದಿಲ್ಲ ಎಂದು ಹೇಳಿದರು.
ರಾಜ್ಯಪಾಲರು ಓದದೇ ಬಿಟ್ಟಿರುವ ಭಾಗಗಳಲ್ಲಿ ಮೊದಲನೆಯದು ‘ಸಾಮಾಜಿಕ ಮತ್ತು ಸಾಂಸ್ಥಿಕ ಸಾಧನೆಗಳ ಹೊರತಾಗಿಯೂ, ಒಕ್ಕೂಟದ ವ್ಯವಸ್ಥೆಯ ಭಾಗವಾಗಿರುವ ಕೇರಳವನ್ನು ಕೇಂದ್ರ ಸರ್ಕಾರ ಆರ್ಥಿಕವಾಗಿ ಕುಗ್ಗಿಸಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ರಾಜ್ಯವು ತೀವ್ರ ಆರ್ಥಿಕ ಒತ್ತಡ ಎದುರಿಸುತ್ತಿದೆ’ ಎಂಬುದಾಗಿತ್ತು.
ಮತ್ತೊಂದು ಭಾಗದಲ್ಲಿ ‘ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳು ದೀರ್ಘಕಾಲದಿಂದ ಬಾಕಿ ಉಳಿದಿವೆ. ನಮ್ಮ ಸರ್ಕಾರವು ಈ ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದೆ, ಇವುಗಳನ್ನು ಸಂವಿಧಾನ ಪೀಠಕ್ಕೆ ಉಲ್ಲೇಖಿಸಲಾಗಿದೆ’ ಎಂದು ಮುಖ್ಯಮಂತ್ರಿ ವಿಜಯನ್ ಅವರು ಓದಿ ಹೇಳಿದರು.
ಮಾತ್ರವಲ್ಲ, ರಾಜ್ಯ ಸಚಿವ ಸಂಪುಟ ಅನುಮೋದಿಸಿದ ಭಾಷಣವನ್ನೇ ಅಧಿಕೃತ ಭಾಷಣವೆಂದು ಒಪ್ಪಿಕೊಳ್ಳಬೇಕೆಂದು ವಿಜಯನ್ ಅವರು ಸ್ಪೀಕರ್‌ಗೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.