ADVERTISEMENT

ತ್ರಿಶ್ಶೂರು: ಹಿಂದೂ ಅಲ್ಲವೆಂದು ದೇಗುಲದ ಉತ್ಸವದಲ್ಲಿ ನೃತ್ಯ ಪ್ರದರ್ಶನಕ್ಕೆ ನಕಾರ

ಕೇರಳದ ತ್ರಿಶೂರು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 5:30 IST
Last Updated 29 ಮಾರ್ಚ್ 2022, 5:30 IST
ಮಾನ್ಸಿಯಾ, ಶಾಸ್ತ್ರೀಯ ನೃತ್ಯಗಾರ್ತಿ
ಮಾನ್ಸಿಯಾ, ಶಾಸ್ತ್ರೀಯ ನೃತ್ಯಗಾರ್ತಿ   

ತಿರುವನಂತಪುರ: ಕರ್ನಾಟಕದಲ್ಲಿ ಜಾತ್ರೆ, ಹಬ್ಬ ಮತ್ತು ದೇವಸ್ಥಾನಗಳ ಸುತ್ತಮುತ್ತ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ಒತ್ತಾಯಗಳ ಬೆನ್ನಲ್ಲೇ, ಕೇರಳದಲ್ಲಿ ಹಿಂದೂ ಅಲ್ಲ ಎಂಬ ಕಾರಣಕ್ಕೆ ದೇವಸ್ಥಾನದ ಉತ್ಸವವೊಂದರಲ್ಲಿ ಶಾಸ್ತ್ರೀಯ ನೃತ್ಯಗಾರ್ತಿಯೊಬ್ಬರ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ.

ಮದ್ರಾಸ್ ವಿ.ವಿಯಿಂದ ಎಂ.ಎ ಭರತನಾಟ್ಯಂ ಕೋರ್ಸ್‌ನಲ್ಲಿ ಮೊದಲ ರ‍್ಯಾಂಕ್ ಪಡೆದ ಶಾಸ್ತ್ರೀಯ ನೃತ್ಯಗಾರ್ತಿ ಮಾನ್ಸಿಯಾ ವಿ.ಪಿ ಅವರು ಹಿಂದೂ ಅಲ್ಲ ಎಂಬ ಕಾರಣಕ್ಕೆ ತ್ರಿಶ್ಶೂರು ಜಿಲ್ಲೆಯ ಇರಿಞಾಲಕೂಡದಲ್ಲಿರುವ ಕೂಡಲ್‌ಮಾಣಿಕ್ಯಂ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ. ಈ ವಿಚಾರದ ಬಗ್ಗೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ದೇವಸ್ಥಾನದ ಈ ನಿರ್ಧಾರಕ್ಕೆ ಕೇರಳದ ಮಾಜಿ ಆರೋಗ್ಯ ಸಚಿವೆ ಹಾಗೂ ಸಿಪಿಎಂ ಹಿರಿಯ ನಾಯಕಿಕೆ.ಕೆ ಶೈಲಜಾ ಅವರು ಸೇರಿದಂತೆ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಬ್ಬದ ಉತ್ಸವದ ಭಾಗವಾಗಿ ಏಪ್ರಿಲ್ 21ರಂದು ಮಾನ್ಸಿಯ ಅವರ ನೃತ್ಯ ಪ್ರದರ್ಶನ ನಿಗದಿಯಾಗಿತ್ತು. ಈ ಕುರಿತು ಜಾಹೀರಾತನ್ನು ದೇವಸ್ಥಾನ ಪ್ರಕಟಿಸಿತ್ತು. ಆದರೆ ಕೆಲ ದಿನಗಳ ಬಳಿಕ ಹಿಂದೂ ಧರ್ಮಕ್ಕೆ ಸೇರಿದವರು ಅಲ್ಲ ಎಂಬ ಕಾರಣಕ್ಕೆ ದೇವಸ್ಥಾನದಲ್ಲಿ ನೃತ್ಯಕ್ಕೆ ಅವಕಾಶ ನೀಡಲಾಗದು ಎಂದು ಮಾನ್ಸಿಯಾ ಅವರಿಗೆ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದೇವಸ್ಥಾನದ ಸಂಪ್ರದಾಯದ ಪ್ರಕಾರ ಹಿಂದೂ ಧರ್ಮದ ನಂಬಿಕಸ್ತರಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶ ನೀಡಲಾಗುತ್ತದೆ. ನೃತ್ಯದ ವೇದಿಕೆ ದೇವಸ್ಥಾನದ ಒಳಗಿರುವ ಕಾರಣ ಮಾನ್ಸಿಯಾ ಅವರ ನೃತ್ಯಕ್ಕೆ ಅವಕಾಶ ನೀಡಲಾಗದು ಎಂದು ಕೆಲ ಮಾಧ್ಯಮ ಪ್ರತಿನಿಧಿಗಳಿಗೆ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದ ಹಬ್ಬದ ಉತ್ಸವದಲ್ಲೂ ಇದೇ ಕಾರಣಕ್ಕೆ ನನ್ನ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿತ್ತು ಎಂದು ಮಾನ್ಸಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಅಲವತ್ತುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.