ADVERTISEMENT

ಕೇರಳ ಕಡುಬಡತನ ಮುಕ್ತ: ಸಿ.ಎಂ ಪಿಣರಾಯಿ ಘೋಷಣೆ

ಅಸಂಬದ್ಧ ಎಂದ ವಿಪಕ್ಷಗಳಿಂದ ಸಭಾತ್ಯಾಗ

ಪಿಟಿಐ
Published 1 ನವೆಂಬರ್ 2025, 14:30 IST
Last Updated 1 ನವೆಂಬರ್ 2025, 14:30 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್   

ತಿರುವನಂತಪುರ: ‘ಕೇರಳವು ಕಡುಬಡತನ ಮುಕ್ತ ರಾಜ್ಯವಾಗಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಘೋಷಿಸಿದ್ದಾರೆ.

ಕೇರಳ ರಾಜ್ಯ ರಚನೆಯಾದ ದಿನಾಚರಣೆ (ಕೇರಳ ಪಿರವಿ) ಅಂಗವಾಗಿ ಕರೆಯಲಾಗಿದ್ದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಅವರು ಈ ಘೋಷಣೆ ಮಾಡಿದರು.

‘ಮುಖ್ಯಮಂತ್ರಿ ಮಾಡಿರುವ ಘೋಷಣೆ ಅಸಂಬದ್ಧ’ ಎಂದು ಟೀಕಿಸಿದ ಕಾಂಗ್ರೆಸ್‌ ನೇತೃತ್ವದ ವಿಪಕ್ಷ ಪಾಳಯದ ಶಾಸಕರು, ಸರ್ಕಾರದ ನಿಲುವನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿದ ಘಟನೆಗೂ ಸದನ ಸಾಕ್ಷಿಯಾಯಿತು.

ADVERTISEMENT

ಈ ಕುರಿತು ಮುಖ್ಯಮಂತ್ರಿ ಘೋಷಣೆ ಮಾಡಿದ ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ವಿ.ಡಿ.ಸತೀಶನ್,‘ಮುಖ್ಯಮಂತ್ರಿಯವರ ಹೇಳಿಕೆ ಅಸಂಬದ್ಧ ಹಾಗೂ ಸದನದ ನಿಯಮಗಳ ಉಲ್ಲಂಘನೆ’ ಎಂದು ಟೀಕಿಸಿದರು.

‘ಈ ಅಧಿವೇಶನದಲ್ಲಿ ನಾವು ಭಾಗವಹಿಸುವುದಿಲ್ಲ ಹಾಗೂ ಸಭಾತ್ಯಾಗ ಮಾಡುತ್ತೇವೆ’ ಎಂದು ಸತೀಶನ್‌ ಹೇಳಿದರು. ಬಳಿಕ, ‘ಸರ್ಕಾರದ ಘೋಷಣೆಯೇ ವಂಚನೆ... ನಾಚಿಕಗೇಡಿನದು...’ ಎಂಬ ಘೋಷಣೆಗಳನ್ನು ಕೂಗುತ್ತಾ ಹೊರನಡೆದರು.

ವಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್, ‘ಸರ್ಕಾರದ ಘೋಷಣೆ ಅಸಂಬದ್ಧ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಈ ಮಾತುಗಳು ಸ್ವತಃ ಅವರ ವರ್ತನೆಯನ್ನೇ ಹೇಳುತ್ತವೆ’ ಎಂದು ತಿರುಗೇಟು ನೀಡಿದರು.

‘ಯಾವುದನ್ನು ಜಾರಿಗೊಳಿಸಲು ಸಾಧ್ಯವೋ ಅಂಥ ಭರವಸೆಗಳನ್ನಷ್ಟೇ ನಾವು ನೀಡುತ್ತೇವೆ. ನಾವು ನೀಡಿದ ಭರವಸೆಗಳ ಅನುಷ್ಠಾನವನ್ನೂ ಮಾಡಿದ್ದೇವೆ. ಇದು ವಿಪಕ್ಷಗಳಿಗೆ ನಮ್ಮ ಉತ್ತರ’ ಎಂದರು. 

62 ಲಕ್ಷ ಕುಟುಂಬಗಳಿಗೆ ಪಿಂಚಣಿ, ಮನೆ ಇಲ್ಲದ ಕುಟುಂಬಗಳಿಗೆ 4.70 ಲಕ್ಷ ಮನೆಗಳು, ಆರು ಸಾವಿರ ಸಾರ್ವಜನಿಕ ಆರೋಗ್ಯ ಕೇಂದ್ರಗಳು, 43 ಲಕ್ಷ ಕುಟುಂಬಗಳಿಗೆ ಉಚಿತ ವಿಮೆ ಮತ್ತು ನಾಲ್ಕು ಲಕ್ಷ ಕುಟುಂಬಗಳಿಗೆ ಭೂಮಿಯನ್ನು ಒದಗಿಸಲಾಗಿದೆ. ಇಂತಹ ಜನಪರ ಯೋಜನೆಗಳಿಂದ ಕೇರಳದಲ್ಲಿ ಕಡುಬಡತವನ್ನು ಹೋಗಲಾಡಿಸಲಾಗಿದೆ ಎಂದು ಪ್ರತಿಪಾದಿಸಿದರು.   

ವಿ.ಡಿ. ಸತೀಶನ್‌
ಕಡುಬಡತನ ನಿರ್ಮೂಲನೆ ಮಾಡುವ ಮೂಲಕ ಕೇರಳವು ಕಲ್ಯಾಣ ಕಾರ್ಯಕ್ರಮಗಳ ಪ್ರಯೋಗಾಲಯವಾಗಿ ಎನಿಸಿದೆ. ರಾಜ್ಯವು ದೇಶಕ್ಕೇ ಮಾದರಿಯಾಗಿದೆ
ಪಿಣರಾಯಿ ವಿಜಯನ್ ಮುಖ್ಯಮಂತ್ರಿ
ತಿರುವನಂತಪುರ ಜಿಲ್ಲೆಯಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಮಹಿಳೆ ಹಸಿವಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸರ್ಕಾರದ ಘೋಷಣೆ ಅಸಂಬದ್ಧ ಎನ್ನುವುದಕ್ಕೆ ಇದು ನಿದರ್ಶನ
ವಿ.ಡಿ.ಸತೀಶನ್ ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.