ಚಂದ್ರ–ಚುಕ್ಕಿ–ಬಾನು ಮೀನಾಕ್ಷಿಯ ಆಡಿಯೊ, ವಿಡಿಯೊ ಟೆಕ್ಸ್ಟ್ ನ ದೃಶ್ಯ
ತಿರುವನಂತಪುರ: ತನ್ನ ಬುಡಕಟ್ಟು ಭಾಷೆ ಮಾತ್ರ ಗೊತ್ತಿರುವ ಅಂಗವಿಕಲ ಬಾಲಕಿಯೊಬ್ಬಳಿಗೆ ಅವಳದೇ ಬುಡಕಟ್ಟು ಭಾಷೆಯಲ್ಲಿ ಶಿಕ್ಷಣ ನೀಡಲು ಕೇರಳ ಶಿಕ್ಷಣ ಇಲಾಖೆ ವಿಶೇಷ ಆಸ್ಥೆ ವಹಿಸಿದೆ.
ಕೇರಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಯತ್ನದಿಂದ ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಬಳಿಯ ಪೂಚಪ್ಪರ ದಟ್ಟಾರಣ್ಯದ ಚೋಳನಾಯಕ ಎಂಬ ಬುಡಕಟ್ಟು ಜನಾಂಗದ 12 ವರ್ಷ ವಯಸ್ಸಿನ ಮೀನಾಕ್ಷಿ ಎಂಬ ಬಾಲಕಿ ಮೊಗದಲ್ಲಿ ಸಂತಸ ಮೂಡಿದೆ.
ಕಳೆದ ಜನವರಿಯಲ್ಲಿ ಮೀನಾಕ್ಷಿಯ ತಂದೆ ಮಣಿ ಎಂಬುವರು ಪೂಚಪ್ಪರ ಬಳಿ ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟಿದ್ದರು. ಆ ನಂತರ ಮೀನಾಕ್ಷಿ ಹಾಗೂ ಆಕೆಯ ತಾಯಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಿಲಂಬೂರ್‌ನ ಅರಣ್ಯ ಇಲಾಖೆಯ ಅತಿಥಿ ಗೃಹಕ್ಕೆ ಸ್ಥಳಾಂತರಿಸಿದ್ದರು.
‘ಮೀನಾಕ್ಷಿಗೆ ಅಕ್ಷರ ಕಲಿಯಲು ಆಸೆಯಿದೆ. ಆದರೆ, ಅವಳಿಗೆ ದೈಹಿಕ ನ್ಯೂನ್ಯತೆ ಇರುವುದರಿಂದ ಮತ್ತು ಬುಡಕಟ್ಟು ಭಾಷೆ ಬಿಟ್ಟು ಬೇರೆ ಯಾವ ಭಾಷೆಯೂ ಗೊತ್ತಿಲ್ಲದಿರುವುದರಿಂದ ಸಮಸ್ಯೆ ಆಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಲಪ್ಪುರಂ ಜಿಲ್ಲಾ ಶಿಕ್ಷಣ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಅಧಿಕಾರಿಗಳು ಕೇಂದ್ರ ಕಚೇರಿಗೆ ಸಂಪರ್ಕ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಅಲ್ಲಿನ ಹಿರಿಯ ಅಧಿಕಾರಿಗಳು ಮೀನಾಕ್ಷಿ ಅಕ್ಷರಭ್ಯಾಸ ಮಾಡಲು ಅನುಕೂಲ ಆಗುವಂತೆ ಆಕೆಯದ್ದೇ ಚೋಳನಾಯಕ ಬುಡಕಟ್ಟು ಭಾಷೆಯಲ್ಲಿ 30 ಆಡಿಯೊ, ವಿಡಿಯೊ ಟೆಕ್ಸ್ಟ್ ಇರುವ ಪಠ್ಯಗಳನ್ನು ಸಿದ್ದಪಡಿಸಲು ವ್ಯವಸ್ಥೆ ಕಲ್ಪಿಸಿತ್ತು.
ಸಿದ್ದಪಡಿಸಿದ ಆಡಿಯೊ, ವಿಡಿಯೊ ಟೆಕ್ಸ್ಟ್ ಅನ್ನು ತೆಗೆದುಕೊಂಡು ಮಲಪ್ಪುರಂನ ಸಮಗ್ರ ಶಿಕ್ಷಾ ಕೇರಳ (ಎಸ್‌ಎಸ್‌ಕೆ) ಯೋಜನೆಯ ಅಧಿಕಾರಿಗಳು ವಾರದಲ್ಲಿ ಒಂದು ದಿನ ಮೀನಾಕ್ಷಿ ಇದ್ದಲ್ಲಿ ತೆರಳಿ ಅವಳಿಗೆ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದ್ದಾರೆ.
‘ಚಂದ್ರ–ಚುಕ್ಕಿ–ಬಾನು ಎಂದು ಮೀನಾಕ್ಷಿಯ ಆಡಿಯೊ, ವಿಡಿಯೊ ಟೆಕ್ಸ್ಟ್‌ಗೆ ಹೆಸರಿಡಲಾಗಿದೆ. ನಮ್ಮ ಪ್ರಯತ್ನಕ್ಕೆ ಅಲ್ಪಾವಧಿಯಲ್ಲೇ ಆಕೆ ಸ್ಪಂದಿಸಿದ್ದಾಳೆ. ಇದರಿಂದ ನಮಗೆಲ್ಲ ತುಂಬಾ ಸಂತಸವಾಗಿದೆ. ಎಸ್‌ಎಸ್‌ಕೆ ಯೋಜನೆಯಡಿ ರಾಜ್ಯದಾದ್ಯಂತ ಮನೆ ಮನೆಗೆ ತೆರಳಿ 6,168 ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ’ ಎಂದು ಎಸ್‌ಎಸ್‌ಕೆ ರಾಜ್ಯ ಯೋಜನಾ ನಿರ್ದೇಶಕಿ ಸುಪ್ರೀಯಾ ಎ.ಆರ್. ಹೇಳಿದ್ದಾರೆ.
ಈ ಸಂಗತಿಯನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡು ಅಧಿಕಾರಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇರಳ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಅವರು, ‘ಶಿಕ್ಷಣದ ಒಳಗೊಳ್ಳುವಿಕೆಯ ಕೇರಳ ಮಾದರಿ ಇದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.