ADVERTISEMENT

ಚಿನ್ನ ಕಳ್ಳಸಾಗಣೆ: ಸ್ವಪ್ನಾ ಸುರೇಶ್ ವಿಚಾರಣೆ ನಡೆಸಲಿರುವ ಕಸ್ಟಮ್ಸ್‌ ಅಧಿಕಾರಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2020, 11:23 IST
Last Updated 22 ಜುಲೈ 2020, 11:23 IST
ಸಪ್ನಾ ಸುರೇಶ್‌ ಅವರನ್ನು ವಿಚಾರಣೆಗೆ ಕರೆದೊಯ್ಯುತ್ತಿರುವ ಪೊಲೀಸರು
ಸಪ್ನಾ ಸುರೇಶ್‌ ಅವರನ್ನು ವಿಚಾರಣೆಗೆ ಕರೆದೊಯ್ಯುತ್ತಿರುವ ಪೊಲೀಸರು   

ತಿರುವನಂತಪುರ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ವಿಚಾರಣೆ ನಡೆಸಲು ಕಸ್ಟಮ್ಸ್‌ ಅಧಿಕಾರಿಗಳಿಗೆ ಕೊಚ್ಚಿಯ ವಿಶೇಷ ಎನ್ಐಎ ನ್ಯಾಯಾಲಯ ಅನುಮತಿ ನೀಡಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಸ್ವಪ್ನಾ ಸುರೇಶ್‌ ಮತ್ತು ಸಂದೀಪ್‌ ನಾಯರ್‌ ಅವರನ್ನು ಎರಡು ವಾರಗಳ ಹಿಂದೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು.

ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಹಮ್‌ಜದ್‌ ಅಬ್ದು ಸಲಾಂರನ್ನು ಕಸ್ಟಮ್ಸ್ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಆರೋಪಿಯು ಕಳ್ಳಸಾಗಣೆ ಮಾಡಿದ ಚಿನ್ನ ಖರೀದಿಗೆ ಹಣ ನೀಡಿದ್ದಾರೆ. ಅವರನ್ನು ಕೊಚ್ಚಿಯ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇದೇ ವೇಳೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ಈಗಾಗಲೇ ಎನ್‌ಐಎ ತನಿಖೆ ನಡೆಸುತ್ತಿದ್ದು, ಇದರಲ್ಲಿ ಸಿಬಿಐ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ಎರ್ನಾಕುಲಂನ ಜಲಾಲ್‌, ಮಲಪ್ಪುರಂನ ಮೊಹಮ್ಮದ್‌ ಶಫಿ, ಹಮ್ಜದ್ ಅಲಿ, ಮೊಹಮ್ಮದ್ ಅನ್ವರ್ ಟಿ.ಎಂ ಮತ್ತು ಸೈದಲವಿ ಅವರನ್ನು ಕಳೆದ ವಾರ ಬಂಧಿಸಲಾಗಿತ್ತು.

ಕೇರಳದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣವು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಉದ್ದೇಶದಿಂದ ಕೂಡಿದೆ. ಕಳ್ಳಸಾಗಾಣಿಕೆ ತಂಡವು ಕೃತ್ಯಕ್ಕಾಗಿ ಯುಎಇ ದೂತಾವಾಸದ ನಕಲಿ ದಾಖಲೆಗಳನ್ನು ಬಳಸಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎಎನ್‌ಐ) ಹೇಳಿದೆ.

ಚಿನ್ನದ ಕಳ್ಳ ಸಾಗಣೆಯಲ್ಲಿ ಅರಬ್‌ ಸಂಯುಕ್ತ ರಾಷ್ಟ್ರಗಳ ದೂತಾವಾಸದ ಮಾಜಿ ಸಿಬ್ಬಂದಿ ಜತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್‌ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಕಸ್ಟಮ್ಸ್‌ ಅಧಿಕಾರಿಗಳು ಎಂ.ಶಿವಶಂಕರ್ ಅವರನ್ನು ವಿಚಾರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.