ADVERTISEMENT

ಕೇರಳ: ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯಕ್ಕೆ 31ಕ್ಕೆ ವಿಶೇಷ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 13:26 IST
Last Updated 24 ಡಿಸೆಂಬರ್ 2020, 13:26 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ತಿರುವನಂತಪುರ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕರಿಸುವುದಕ್ಕಾಗಿ ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಲು ಕೇರಳ ಸರ್ಕಾರ ಮತ್ತೆ ಮುಂದಾಗಿದೆ.

‘ಇದೇ 31ರಂದು ವಿಶೇಷ ಅಧಿವೇಶನ ನಡೆಸಲು ನಿರ್ಧರಿಸಿದ್ದೇವೆ. ಕೃಷಿ ಕ್ಷೇತ್ರದ ಜೊತೆಗೆ ರೈತರ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸುವ ಅವಶ್ಯಕತೆ ಇದೆ. ಈ ಉದ್ದೇಶದಿಂದಲೇ ವಿಶೇಷ ಅಧಿವೇಶನ ಕರೆಯಲಾಗಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಗುರುವಾರ ಹೇಳಿದ್ದಾರೆ.

ಮುಖ್ಯಮಂತ್ರಿಯವರ ಈ ನಿರ್ಧಾರದಿಂದಾಗಿ ಸರ್ಕಾರ ಮತ್ತು ರಾಜ್ಯಪಾಲರ ನಡುವಣ ಸಂಘರ್ಷ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಈ ಮೊದಲು ಇದೇ 23ರಂದು ವಿಶೇಷ ಅಧಿವೇಶನ ಕರೆಯಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನು ತಿರಸ್ಕರಿಸಿದ್ದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ಜನವರಿ 8ರಂದು ಬಜೆಟ್‌ ಅಧಿವೇಶನ ನಿಗದಿಯಾಗಿರುವಾಗ ಈಗ ‘ವಿಶೇಷ ಅಧಿವೇಶನ ಕರೆಯುವ ತುರ್ತು ಏನಿದೆ?’ ಎಂದು ಮುಖ್ಯಮಂತ್ರಿ ಅವರಿಂದ ವಿವರಣೆ ಕೇಳಿದ್ದರು.

ರಾಜ್ಯಪಾಲರ ಈ ನಿರ್ಧಾರವನ್ನು ಆಡಳಿತಾರೂಢ ಸಿಪಿಎಂ ಹಾಗೂ ಪ್ರತಿಪಕ್ಷ ಮೈತ್ರಿಕೂಟ ಯುಡಿಎಫ್‌ ತೀವ್ರವಾಗಿ ಖಂಡಿಸಿದ್ದವು. ಈ ಕ್ರಮ ಅಸಾಂವಿಧಾನಿಕ ಎಂದೂ ಟೀಕಿಸಿದ್ದವು. ಮುಖ್ಯಮಂತ್ರಿ ಪಿಣರಾಯಿ ಅವರೂ ಪತ್ರದ ಮೂಲಕ ರಾಜ್ಯಪಾಲರಿಗೆ ತೀಕ್ಷ್ಣ ಉತ್ತರ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.