ADVERTISEMENT

ವಿವಾಹ ನೋಂದಣಿ: ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಲು ಕೇರಳ ಹೈಕೋರ್ಟ್‌ ಅನುಮತಿ

ಪಿಟಿಐ
Published 7 ಆಗಸ್ಟ್ 2021, 8:26 IST
Last Updated 7 ಆಗಸ್ಟ್ 2021, 8:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಚ್ಚಿ: ಕೋವಿಡ್‌–19 ಸಾಂಕ್ರಾಮಿಕ ಸೃಷ್ಟಿಸಿರುವ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನಗಳ ಬಳಕೆಯ ವ್ಯಾಪ್ತಿಯನ್ನು ವಿಸ್ತರಿಸುವತ್ತಾ ಗಮನ ಹರಿಸಿರುವ ಕೇರಳದ ಹೈಕೋರ್ಟ್‌, ವಿದೇಶದಲ್ಲಿರುವ ವ್ಯಕ್ತಿಯೊಬ್ಬರಿಗೆ ತನ್ನ ವಿವಾಹ ನೋಂದಣಿಯ ಅವಧಿಯಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಲು ಅನುಮತಿ ನೀಡಿದೆ.

‘ಜುಲೈ 2016ರಲ್ಲಿ ವಿವಾಹವಾದ ನಂತರ, ನನ್ನ ಪತಿ ನೌಕರಿಗಾಗಿ ಕೆನಡಾಕ್ಕೆ ತೆರಳಿದರು. ಹೀಗಾಗಿ ನಾವು ಸ್ಥಳೀಯ ಪಂಚಾಯ್ತಿಗೆ ತೆರಳಿ ರಿಜಿಸ್ಟ್ರಾರ್‌ ಎದುರು 1954ರ ವಿಶೇಷ ವಿವಾಹ ಕಾಯಿದೆಯಡಿ ನೋಂದಣಿ ಮಾಡಿಸಲು ಸಾಧ್ಯವಾಗಲಿಲ್ಲ‘ ಎಂದು 28 ವರ್ಷದ ವಧು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಕೋವಿಡ್‌–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿರುವ ಕಾರಣ, ನೋಂದಣಿಗಾಗಿ ಕೆನಡಾದಿಂದ ಭಾರತಕ್ಕೆ ಬಂದು ರಿಜಿಸ್ಟ್ರಾರ್‌ ಎದುರು ಭೌತಿಕವಾಗಿ ಹಾಜರಾಗುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಪತಿಗೆ ವಿವಾಹ ನೋಂದಣಿಯ ವೇಳೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಲು ಅನುಮತಿ ನೀಡಿ, ಪ್ರಮಾಣ ಪತ್ರ ವಿತರಿಸಲು ವಿವಾಹ ನೋಂದಣಿಯ ರಿಜಿಸ್ಟ್ರಾರ್‌ ಅವರಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ADVERTISEMENT

ಪ್ರಸ್ತುತದ ಪರಿಸ್ಥಿತಿಯನ್ನು ಗಮನಸಿ, ವಧುವಿನ ಅರ್ಜಿಯನ್ನು ಪರಿಶೀಲಿಸಿದ ಕೇರಳ ಹೈಕೋರ್ಟ್‌, ಕೆನಡಾದಲ್ಲಿರುವ ಪತಿಗೆ ನೋಂದಣಿ ಸಮಯದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಲು ಅನುಮತಿ ನೀಡಿ, ಹತ್ತು ದಿನಗಳಲ್ಲಿ ಪ್ರಮಾಣ ಪತ್ರವನ್ನೂ ವಿತರಿಸುವಂತೆ ವಿವಾಹ ನೋಂದಣಿ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.