ADVERTISEMENT

ಕೇರಳ | ವ್ಯಕ್ತಿಯೊಬ್ಬರಲ್ಲಿ ನಿಫಾ ವೈರಸ್ ಸೋಂಕು ದೃಢ: ಆರೋಗ್ಯ ಸಚಿವೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 4:47 IST
Last Updated 4 ಜೂನ್ 2019, 4:47 IST
   

ಕೊಚ್ಚಿ:ರಾಜ್ಯದಲ್ಲಿ ವ್ಯಕ್ತಿಯೊಬ್ಬರಿಗೆ ನಿಫಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮಂಗಳವಾರ ಹೇಳಿದ್ದಾರೆ.

ಕೊಚ್ಚಿಯ ಎರ್ನಾಕುಳಂನ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವ ಸಂಬಂಧ ರಕ್ತ ಮಾದರಿಯನ್ನು ಪುಣೆಯ ವೈರಾಲಜಿ ಇನ್‌ಸ್ಟಿಟ್ಯೂಟ್‌ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ವೈರಸ್‌ ಇರುವುದು ವರದಿಯಲ್ಲಿ ದೃಢಪಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ನಿಫಾ ಸೋಂಕು ಭೀತಿಯಿಂದ 86 ಜನರ ಆರೋಗ್ಯದ ಮೇಲೆ ತೀವ್ರ ತಪಾಸಣೆ ಮತ್ತು ನಿಗಾ ವಹಿಸಲಾಗಿದೆ. ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಶೈಲಜಾ ಅವರು ಸೋಮವಾರ ತಿಳಿಸಿದ್ದರು.

ADVERTISEMENT

ಎರ್ನಾಕುಳಂ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿರುವ ವಿದ್ಯಾರ್ಥಿಯೊಬ್ಬನಿಗೆ ನಿಫಾ ವೈರಸ್ ಸೋಂಕು ತಗಲಿದೆ ಎಂದು ವೈದ್ಯರು ಸಂದೇಹ ವ್ಯಕ್ತ ಪಡಿಸಿದ್ದರು. ಆದರೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಜತೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೈ. ಸಫರುಲ್ಲಾ ನಿನ್ನೆಯಷ್ಟೇ ತಿಳಿಸಿದ್ದರು.

ಸಿಫಾ ಬಾಧಿತ ಎಂದು ಶಂಕೆ ಇರುವ ವಿದ್ಯಾರ್ಥಿಯ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಎರ್ನಾಕುಳಂ ಜಿಲ್ಲಾ ವೈದ್ಯಾಧಿಕಾರಿ ಎನ್.ಕೆ. ಕುಟ್ಟಪ್ಪನ್ ಹೇಳಿದ್ದರು.

ಎರ್ನಾಕುಳಂ, ತ್ರಿಶ್ಶೂರ್, ಕಳಮಶ್ಶೇರಿ, ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಐಸೋಲೇಷನ್ ವಾರ್ಡ್‌ಗಳನ್ನು ಸಿದ್ಧ ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.