ADVERTISEMENT

ಕೇರಳ ಹಿಜಾಬ್ ವಿವಾದ: ಮಗಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದ ಪೋಷಕರು

ಪಿಟಿಐ
Published 17 ಅಕ್ಟೋಬರ್ 2025, 5:30 IST
Last Updated 17 ಅಕ್ಟೋಬರ್ 2025, 5:30 IST
ಹಿಜಾಬ್: ಪ್ರಾತಿನಿಧಿಕ ಚಿತ್ರ
ಹಿಜಾಬ್: ಪ್ರಾತಿನಿಧಿಕ ಚಿತ್ರ   

ಕೊಚ್ಚಿ: ಪಳ್ಳುರುತ್ತಿಯ ಚರ್ಚ್ ಶಾಲೆಯೊಂದರಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಕಾರಣ ವಿದ್ಯಾರ್ಥಿನಿಯನ್ನು ಬೇರೆ ಶಾಲೆಗೆ ಸೇರಿಸುವುದಾಗಿ ಆಕೆಯ ಪೋಷಕರು ಹೇಳಿದ್ದಾರೆ.

ಮತ್ತೆ ಆ ಶಾಲೆಗೆ ಮಗಳನ್ನು ಕಳುಹಿಸುವುದಿಲ್ಲ ಎಂದು ಸಂತ ರೀಟಾ ಪಬ್ಲಿಕ್ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯ ತಂದೆ ಪಿಟಿಐಗೆ ತಿಳಿಸಿದ್ದಾರೆ. ‘ಹಿಜಾಬ್ ಘಟನೆಯಿಂದಾಗಿ ನನ್ನ ಮಗಳು ಭಾರಿ ಒತ್ತಡಕ್ಕೆ ಒಳಗಾಗಿದ್ದಾಳೆ. ಮತ್ತೆ ಆ ಶಾಲೆಗೆ ಹೋಗುವುದಿಲ್ಲ ಎಂದು ಆಕೆ ಹೇಳಿದ್ದಾಳೆ. ಆಕೆಯ ಬಯಕೆಯನ್ನು ನಾವು ಗೌರವಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ದಾಖಲಾತಿಗಾಗಿ ಬೇರೆ ಶಾಲೆಗಳನ್ನು ಕುಟುಂಬ ಸಂಪರ್ಕಿಸಿದೆ. ಒಂದು ಶಾಲೆ ದಾಖಲು ಮಾಡಿಕೊಳ್ಳುವುದಾಗಿ ಹೇಳಿದೆ. ಆದರೆ ಇನ್ನೂ ಇತರ ಆಯ್ಕೆಗಳ ಬಗ್ಗೆಯೂ ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಈ ವಿವಾದ ಆರಂಭವಾದ ಬಳಿಕ ಸಂತ ರೀಟಾ ಶಾಲೆಯ ಶಿಕ್ಷಕರಾಗಲಿ, ಆಡಳಿತ ಸಮಿತಿಯಾಗಲಿ ನಮ್ಮನ್ನು ಸಂಪರ್ಕಿಸಿಲ್ಲ. ನನ್ನ ಮಗಳು ಎರಡು ದಿನದಿಂದ ಶಾಲೆಗೆ ಹೋಗಿಲ್ಲ. ನಮಗೆ ಯಾವುದೇ ಮಾಹಿತಿಯನ್ನೂ ಅವರು ನೀಡಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಶಾಲೆಯಲ್ಲಿ ವಿದ್ಯಾರ್ಥಿನಿ ಹಿಜಾಬ್ ಧರಿಸಿದ್ದು ಶಾಲಾ ಸಮವಸ್ತ್ರ ಸಂಹಿತೆಯ ಉಲ್ಲಂಘನೆ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿತ್ತು. ಅಕ್ಟೋಬರ್ 10 ರಂದು ವಿದ್ಯಾರ್ಥಿನಿಯ ಪೋಷಕರು ಕೆಲವರೊಂದಿಗೆ ಶಾಲೆಗೆ ತೆರಳಿ ಆಡಳಿತ ಮಂಡಳಿಯ ನಿಲುವನ್ನು ಪ್ರಶ್ನಿಸಿದ್ದರು. ಇದಾದ ಬಳಿಕ ಶಾಲೆಗೆ ಎರಡು ದಿನಗಳ ರಜೆ ಘೋಷಿಸಲಾಗಿತ್ತು.

ಶಾಲೆಗೆ ಭದ್ರತೆ ನೀಡಬೇಕು ಎಂದು ಕೇರಳ ಹೈಕೋರ್ಟ್ ನಿರ್ದೇಶಿಸಿತ್ತು. ಕೇರಳದಲ್ಲಿ ಈ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿದೆ.