ಕೋಯಿಕ್ಕೋಡ್/ನವದೆಹಲಿ: ‘ಕೋಯಿಕ್ಕೋಡ್‌ನ ಕರಿಪ್ಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ಕಾರಣವೇನು ಎಂಬುವುದನ್ನು ಪತ್ತೆ ಹಚ್ಚಲು ತನಿಖೆಗೆ ಆದೇಶಿಸಲಾಗಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್ ಸಿಂಗ್ ಪುರಿ ಶನಿವಾರ ತಿಳಿಸಿದರು.
ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಅಧಿಕಾರಿಗಳಿಂದ ಘಟನೆಯ ವಿವರಗಳನ್ನು ಪಡೆದು ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಪಘಾತಕ್ಕೀಡಾದ ವಿಮಾನದ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ದೊರೆತಿವೆ. ಇವುಗಳನ್ನು ನವದೆಹಲಿಗೆ ಕಳಿಸಲಾಗಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ಘಟನೆಯ ತನಿಖೆ ನಡೆಸುತ್ತಿದೆ’ ಎಂದು ತಿಳಿಸಿದರು.
ಚುರುಕುಗೊಂಡ ತನಿಖೆ: ಅಧಿಕಾರಿಗಳ ತಂಡವೊಂದು ಈಗಾಗಲೇ ಅಪಘಾತ ಸ್ಥಳವನ್ನು ತಲುಪಿದ್ದು, ತನಿಖೆಯನ್ನು ಚುರುಕುಗೊಳಿಸಿದೆ. ಎಎಐಪಿ, ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕ ಮತ್ತು ವಿಮಾನ ಸುರಕ್ಷತಾ ವಿಭಾಗಗಳ ಅಧಿಕಾರಿಗಳು ಜಂಟಿಯಾಗಿ ತನಿಖೆ ಆರಂಭಿಸಿದ್ದಾರೆ. ಏರ್‌ಕ್ರಾಫ್ಟ್ ಆ್ಯಕ್ಸಿಡೆಂಡ್ ಇನ್ವೆಸ್ಟಿಗೇಷನ್ ಬ್ಯೂರೊ (ಎಎಐಬಿ) ಮತ್ತು ಡಿಜಿಸಿಎ ಆ್ಯಂಡ್ ಫ್ಲೈಟ್ ಸೇಫ್ಟಿ ಇಲಾಖೆಯ ಅಧಿಕಾರಿಗಳು ಸಹ ನಗರಕ್ಕೆ ಬಂದಿದ್ದಾರೆ.
ಮೃತರ ಕುಟುಂಬಕ್ಕೆ ₹20 ಲಕ್ಷ ಪರಿಹಾರ: ಮೃತಪಟ್ಟವರ ಕುಟುಂಬದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ₹10 ಲಕ್ಷ ಪರಿಹಾರ ಘೋಷಿಸಿದೆ. ತೀವ್ರವಾಗಿ ಗಾಯಗೊಂಡವರಿಗೆ ತಲಾ ₹2 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ ತಲಾ ₹50 ಸಾವಿರ ಮಧ್ಯಂತರ ಪರಿಹಾರ ಘೋಷಿಸಲಾಗಿದೆ.
ಮೃತರಲ್ಲಿ ಒಬ್ಬರಿಗೆ ಕೋವಿಡ್: ದುರಂತದಲ್ಲಿ ಮೃತಪಟ್ಟವರ ಪೈಕಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಿ, ಕೋವಿಡ್–19 ತಪಾಸಣೆ ನಡೆಸಲು ನಿರ್ಧರಿಸಲಾಗಿದೆ.ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರಿಗೂ ಕೂಡ ಕೋವಿಡ್ ಪರೀಕ್ಷೆ ನಡೆಸಲಾಗುವುದು ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
ದುಬೈನಿಂದ ವಂದೇ ಭಾರತ್ ಮಿಷನ್‌ನಡಿ ಭಾರತೀಯರನ್ನು ಕರೆ ತಂದಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೋಯಿಕ್ಕೋಡ್ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿ ಕಣಿವೆಗೆ ಬಿದ್ದು ಎರಡು ಹೋಳಾಗಿತ್ತು.ಶುಕ್ರವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಪೈಲಟ್‌ಗಳು ಸೇರಿದಂತೆ 18 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಮೃತರ ಸಂಖ್ಯೆ 18ಕ್ಕೆ ಏರಿಕೆ
ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕರ ಪೈಕಿ ಒಬ್ಬರು ಶನಿವಾರ ಅಸುನೀಗಿದ್ದಾರೆ. ಇದರೊಂದಾಗಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಮತಪಟ್ಟ 17 ಪ್ರಯಾಣಿಕರ ಗುರುತನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೇ ಕುಟುಂಬದ ಏಳು ಮಂದಿ ರಕ್ಷಣೆ:
ದುಬೈನಿಂದ ಕೊಯಿಕ್ಕೋಡ್‌ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ಒಂದೇ ಕುಟುಂಬದ ಏಳು ಸದಸ್ಯರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ದುಬೈನಲ್ಲಿ ವಾಸವಾಗಿರುವ ಕೇರಳದ ಸಮೀರ್ ವಡಕ್ಕನ್ ಮತ್ತು ಅವರ ಸಹೋದರ ಸಫ್ವಾನ್ ಕುಟುಂಬದ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಏಳು ಜನರು ಕೋಯಿಕ್ಕೋಡ್ ಮತ್ತು ಮಲ್ಲಪ್ಪುರಂ ಆಸ್ಪತ್ರೆಗೆ ಸೇರಿಸಲಾಗಿದೆ. ಸಮೀರ್ ದುಬೈನಲ್ಲಿಯೇ ಉಳಿದಿದ್ದರು.
ಕೋಯಿಕ್ಕೋಡ್ ತಲುಪಿದ ಪೈಲಟ್‌ಗಳ ಕುಟುಂಬ
ದುರಂತ ಅಂತ್ಯ ಕಂಡ ವಿಮಾನದ ಪೈಲಟ್ ದೀಪಕ್ ಸಾಠೆ ಮತ್ತು ಸಹ ಪೈಲಟ್ ಅಖಿಲೇಶ್ ಕುಮಾರ್ ಅವರ ಮೃತದೇಹಗಳನ್ನು ಕೋಯಿಕ್ಕೋಡ್ ಆಸ್ಪತ್ರೆಯಲ್ಲಿಡಲಾಗಿದೆ. ಇಬ್ಬರೂ ಪೈಲಟ್‌ಗಳ ಕುಟುಂಬದವರನ್ನು ದೆಹಲಿಯಿಂದ ಕೋಯಿಕ್ಕೋಡ್‌ಗೆ ಕರೆ ತರಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆ ತಿಳಿಸಿದೆ.
ನಾಲ್ವರು ಕ್ಯಾಬಿನ್ ಸಿಬ್ಬಂದಿ ಸುರಕ್ಷಿತ: ಈ ವಿಮಾನದಲ್ಲಿದ್ದ ನಾಲ್ವರು ಕ್ಯಾಬಿನ್ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೆರವಿಗೆ ಮೂರು ವಿಮಾನ: ಸಂತ್ರಸ್ತ ಪ್ರಯಾಣಿಕರ ಕುಟುಂಬಕ್ಕೆ ನೆರವಾಗಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆ ದೆಹಲಿಯಿಂದ ಎರಡು ಮತ್ತು ಮುಂಬೈನಿಂದ ಒಂದು ವಿಶೇಷ ವಿಮಾನವನ್ನು ಕೇರಳದ ಕೋಯಿಕ್ಕೋಡ್‌ಗೆ ಕಳುಹಿಸಿದೆ.
ರಜೆಯ ದಿನವೂ ತೆರೆದ ಕಾನ್ಸುಲೇಟ್
ದುಬೈ: ಕೇರಳಕ್ಕೆ ಹೋಗುವ ಪ್ರಯಾಣಿಕರಿಗೆ ನೆರವಾಗುವ ಉದ್ದೇಶದಿಂದ ಇಲ್ಲಿನ ಭಾರತೀಯ ರಾಯಭಾರ ಕಚೇರಿ ರಜೆಯ ದಿನವಾದ ಶನಿವಾರವೂ ಕಾರ್ಯನಿರ್ವಹಿಸಿದೆ.
ಸಾವಿರ ಮೀಟರ್ ದೂರದಲ್ಲೇ ವಿಮಾನ ಭೂಸ್ಪರ್ಶ
ಕೋಯಿಕ್ಕೋಡ್/ನವದೆಹಲಿ: ದುರಂತ ಅಂತ್ಯ ಕಂಡ ವಿಮಾನ‘ರನ್‌ವೇ’ಯಿಂದ ಸಾವಿರ ಮೀಟರ್ ದೂರದಲ್ಲಿರುವ ‘ಟಾಕ್ಸಿವೇ’ ಬಳಿಯೇ ಭೂಸ್ಪರ್ಶ ಮಾಡಿದ ಸಂಗತಿ ಬೆಳಕಿಗೆ ಬಂದಿದೆ.
‘ವಿಮಾನ ಇಳಿಯುವಾಗ ಭಾರಿ ಮಳೆ ಇತ್ತು. ಪೈಲಟ್‌ಗೆ ರನ್‌ವೇ ಸರಿಯಾಗಿ ಕಂಡಿಲ್ಲ. ಬದಲಿ ರನ್‌ವೇ ನೀಡುವಂತೆ ಏರ್‌ಟ್ರಾಫಿಕ್ ಕಂಟ್ರೋಲ್‌ಗೆ ಪೈಲಟ್ ವಿನಂತಿಸಿದ್ದಾರೆ. ಮಳೆಯಿಂದಾಗಿ ಎರಡನೇ ರನ್‌ವೇ ಕೂಡ ಸರಿಯಾಗಿ ಗೋಚರಿಸಲಿಲ್ಲ. ಹೀಗಾಗಿ ರನ್‌ವೇ ಆರಂಭವಾಗುವ 1000 ಮೀಟರ್ ದೂರದಲ್ಲಿರುವ ‘ಟಾಕ್ಸಿವೇ’ ಸಮೀಪದಲ್ಲಿ ವಿಮಾನ ಭೂ ಸ್ಪರ್ಶ ಮಾಡಿದೆ’ ಎಂದು ಎಎಐ ವಕ್ತಾರರು ತಿಳಿಸಿದ್ದಾರೆ.
ಕೋಯಿಕ್ಕೋಡ್‌ನ ಟೇಬಲ್ ಟಾಪ್ ವಿಮಾನ ನಿಲ್ದಾಣವನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿರ್ವಹಣೆ ಮಾಡುತ್ತದೆ. ಬೆಟ್ಟದ ಮೇಲಿನ ವಿಮಾನ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ.
ಟೇಬಲ್ ಟಾಪ್ ವಿಮಾನ ನಿಲ್ದಾಣದ ರನ್‌ವೇ 2700 ಮೀಟರ್ ಉದ್ದವಿದೆ. ಭಾರಿ ಮಳೆಯಿಂದಾಗಿ ವಿಮಾನ ಭೂ ಸ್ಪರ್ಶ ಮಾಡುವ ಸಮಯದಲ್ಲಿ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 2000 ಮೀಟರ್‌ವರೆಗೆ ಮಾತ್ರ ರನ್‌ವೇ ಕಾಣುತ್ತಿತ್ತು ಎಂದು ಹೇಳಲಾಗಿದೆ.
ಸುರಕ್ಷತೆ: ಕಳೆದ ವರ್ಷವೇ ಎಚ್ಚರಿಕೆ
ನವದೆಹಲಿ: ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ‘ವಿವಿಧ ತುರ್ತು ಸುರಕ್ಷತಾ ಕ್ರಮಗಳ ಕೊರತೆ’ ಕಂಡುಬಂದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕಳೆದ ಜುಲೈನಲ್ಲಿಯೇ ಆ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಶೋಕಾಸ್ ನೋಟಿಸ್ ನೀಡಿತ್ತು.
ರನ್‌ವೇನಲ್ಲಿ ಬಿರುಕು, ನೀರು ನಿಂತುಕೊಳ್ಳುವುದು ಹಾಗೂ ಹೆಚ್ಚುವರಿ ರಬ್ಬರ್ ತುಂಡುಗಳು ರನ್‌ವೇ ಮೇಲೆ ಸಂಗ್ರಹವಾಗಿರುವುದು ಸೇರಿದಂತೆ ಹಲವು ತುರ್ತು ಸುರಕ್ಷತಾ ಕ್ರಮಗಳ ಕೊರತೆಗಳನ್ನು ಡಿಜಿಸಿಎ ಗುರುತಿಸಿತ್ತು.
ಕಳೆದ ವರ್ಷ ಜುಲೈ 2ರಂದು ಸೌದಿ ಅರೇಬಿಯಾದಿಂದ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ‘ಟೈಲ್ ಸ್ಟ್ರೈಕ್’ ಆಗಿತ್ತು. ಅಂದರೆ, ವಿಮಾನ ಲ್ಯಾಂಡ್ ಆಗುವಾಗ ವಿಮಾನದ ಹಿಂದಿನ ಭಾಗ ರನ್‌ವೇಗೆ ತಾಗಿತ್ತು.
ಈ ಹಿನ್ನೆಲೆಯಲ್ಲಿ ಡಿಜಿಸಿಎ ಏರ್‌ಪೋರ್ಟ್‌ನಲ್ಲಿರುವ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿತ್ತು. ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಕಳೆದ ಜುಲೈನಲ್ಲಿ ಶೋಕಾಸ್ ನೋಟಿಸ್ ನೀಡಿತ್ತು.
ರಾಂಚಿಯಲ್ಲಿ ತಪ್ಪಿದ ಅನಾಹುತ
ರಾಂಚಿ: ಜಾರ್ಖಂಡ್‌ನ ರಾಂಚಿಯಿಂದ ಮುಂಬೈಗೆ ಹೊರಟಿದ್ದ ಏರ್ ಏಷ್ಯಾ ವಿಮಾನ (i5–632) ಟೇಕಾಫ್ ಆದ ಮರು ಕ್ಷಣದಲ್ಲೇ ತುರ್ತು ಭೂಸ್ಪರ್ಶ ಮಾಡಿದೆ. ಟೇಕಾಫ್ ಆಗುವ ವೇಳೆ ವಿಮಾನಕ್ಕೆ ಹಕ್ಕಿಯೊಂದು ಬಡಿದಿದೆ. ಹೀಗಾಗಿ ವಿಮಾನ ಕೂಡಲೇ ಭೂಸ್ಪರ್ಶ ಮಾಡಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಸಮಸ್ಯೆ ಸರಿಪಡಿಸಿದ ನಂತರ ವಿಮಾನ ಮುಂಬೈಗೆ ಹಾರಿತು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಮುಂಬೈ ತಲುಪಿದ್ದಾರೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.