
ತಿರುವನಂತಪುರ: ಕೇರಳದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೇಲುಗೈ ಸಾಧಿಸಿದೆ. ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಕೊನೆಯ ಕ್ಷಣದಲ್ಲಿ ಘೋಷಿಸಿದ್ದ ಕಲ್ಯಾಣ ಕಾರ್ಯಕ್ರಮಗಳು ಮತದಾರರನ್ನು ಸೆಳೆಯುವಲ್ಲಿ ವಿಫಲವಾಗಿವೆ.
2026ರಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯುಡಿಎಫ್‌ಗೆ ಈ ಗೆಲುವು ದೊಡ್ಡ ಮಟ್ಟದಲ್ಲಿ ಬಲ ತುಂಬಿದೆ. ಇನ್ನೊಂದೆಡೆ ಎಲ್‌ಡಿಎಫ್ ತನ್ನ ಕಾರ್ಯತಂತ್ರದ ಕುರಿತು ಮರು ಚಿಂತನೆ ನಡೆಸಬೇಕಾದ ಸಂದರ್ಭ ಎದುರಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕೇರಳದ ಮತದಾರರ ಒಲವು ಯುಡಿಎಫ್‌ನತ್ತ ಬದಲಾಗುತ್ತಿರುವುದನ್ನು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬೊಟ್ಟು ಮಾಡಿದೆ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಯುಡಿಎಫ್ ಮೇಲುಗೈ ಸಾಧಿಸಿತ್ತು. ಆಡಳಿತ ವಿರೋಧಿ ಅಲೆ ಮತ್ತು ಇತ್ತೀಚಿನ ಶಬರಿಮಲೆ ಚಿನ್ನ ಕಳವು ಪ್ರಕರಣ ಕೂಡ ಯುಡಿಎಫ್‌ಗೆ ಗೆಲುವಿನಲ್ಲಿ ನಿರ್ಣಾಯಕ ಅಂಶಗಳಾಗಿವೆ.
ಚುನಾವಣೆಗೆ ಕೆಲವೇ ದಿನಗಳ ಹಿಂದಷ್ಟೇ ಎಲ್‌ಡಿಎಫ್ ಸರ್ಕಾರ ಸಾಮಾಜಿಕ ಭದ್ರತಾ ಪಿಂಚಣಿ ಮತ್ತು ಆಶಾ ಕಾರ್ಯಕರ್ತೆಯರ ವೇತನವನ್ನು ಹೆಚ್ಚಿಸಿತ್ತು. ಮಹಿಳೆಯರಿಗಾಗಿ ಹೊಸ ಸಾಮಾಜಿಕ ಭದ್ರತಾ ಯೋಜನೆಯನ್ನು ಜಾರಿಗೊಳಿಸಿತ್ತು. ಅತ್ಯಾಚಾರದ ಆರೋಪ ಎದುರಿಸುತ್ತಿರುವ ಕೇರಳದ ಪಾಲಕ್ಕಾಡ್‌ನ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನೇ ಪ್ರಧಾನ ವಿಷಯವಾಗಿಸಿಕೊಂಡು ಎಲ್‌ಡಿಎಫ್ ಪ್ರಚಾರ ನಡೆಸಿತ್ತು. ಆದರೆ, ಚುನಾವಣಾ ಫಲಿತಾಂಶದ ಮೇಲೆ ಇದು ಯಾವುದೂ ಪರಿಣಾಮ ಬೀರಿದಂತಿಲ್ಲ.
ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಬಿಡುಗಡೆ ಮಾಡಿದ ಅಂಕಿ ಅಂಶದಂತೆ ಯುಡಿಎಫ್ ಕೊಲ್ಲಂ, ತ್ರಿಶ್ಯೂರ್ ಮತ್ತು ಕೊಚ್ಚಿ ಪಾಲಿಕೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಕೊಲ್ಲಂ ಪಾಲಿಕೆ 25 ವರ್ಷಗಳಿಂದ ಮತ್ತು ತ್ರಿಶ್ಯೂರ್ ಪಾಲಿಕೆ 10 ವರ್ಷಗಳಿಂದ ಎಲ್‌ಡಿಎಫ್ ವಶದಲ್ಲಿತ್ತು.
ನಟ ಸುರೇಶ್ ಗೋಪಿ ಕಳೆದ ವರ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದ ತ್ರಿಶ್ಯೂರ್‌ನ ಕೊಡುಂಗಲ್ಲೂರ್ ನಗರಸಭೆಯ 46 ವಾರ್ಡ್‌ಗಳಲ್ಲಿ 18ರಲ್ಲಿ ಬಿಜೆಪಿ ಜಯಗಳಿಸಿದೆ. ತ್ರಿಶ್ಯೂರ್ ಪಾಲಿಕೆಯಲ್ಲಿ 8 ಸ್ಥಾನ, ಗುರುವಾಯೂರು ಮತ್ತು ವಡಕ್ಕಾನ್‌ಚ್ಚೇರಿ ನಗರಸಭೆಗಳಲ್ಲಿ ತಲಾ ಎರಡು ಸ್ಥಾನ, ಕುನ್ನಂಕುಳಂ ನಗರಸಭೆಯಲ್ಲಿ 7 ಹಾಗೂ ಇರಿಜ್ಞಾಲಿಕ್ಕುಡ ನಗರಸಭೆಯಲ್ಲಿ 6 ಹಾಗೂ ಚಾಲಕ್ಕುಡಿ ನಗರಸಭೆಯಲ್ಲಿ 1 ಸ್ಥಾನವನ್ನು ಬಿಜೆಪಿ ಗೆದ್ದಿದೆ.
ಶಬರಿಮಲೆ ಪ್ರಕರಣ: ಶಬರಿಮಲೆ ಅಯ್ಯಪ್ಪ ದೇವಸ್ಥಾನವಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿ, ಶಬರಿಮಲೆ ಚಿನ್ನ ಕಳವು ಪ್ರಕರಣದ ವಿರುದ್ಧ ನಡೆದ ಅಭಿಯಾನವು ಬಿಜೆಪಿಗೆ ಹೆಚ್ಚು ಸ್ಥಾನಗಳು ಗೆಲ್ಲುವಂತೆ ಮಾಡಿದೆ. ಇಲ್ಲಿ ಗ್ರಾಮ ಪಂಚಾಯಿತಿಗಳ 142 ವಾರ್ಡ್‌ಗಳಲ್ಲಿ, ನಗರಸಭೆಯ 21 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಪಂದಳಂ ನಗರಸಭೆ ವ್ಯಾಪ್ತಿಯ 9 ವಾರ್ಡ್‌ಗಳಲ್ಲಿ ಕಮಲ ಅರಳಿದೆ.
ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಡಿ.9 ಹಾಗೂ11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು.ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಪ್ರಮಾಣ ವಚನ ಸ್ವೀಕಾರ ಡಿ. 21ರಂದು ನಿಗದಿಯಾಗಿದೆ.
ಯುಡಿಎಫ್ ಮೇಲೆ ನಂಬಿಕೆ ಇರಿಸಿದ ಕೇರಳದ ಜನರಿಗೆ ಧನ್ಯವಾದಗಳು. ಈ ನಿರ್ಣಾಯಕ ಮತ್ತು ಭರವಸೆಯ ಫಲಿತಾಂಶವು 2026ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದೆ–ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ (ಎಕ್ಸ್ ಪೋಸ್ಟ್‌ನಲ್ಲಿ)
ಇದೇ ಪ್ರಜಾಪ್ರಭುತ್ವ ಸೌಂದರ್ಯ. ತಿರುವನಂತಪುರ ಕ್ಷೇತ್ರದಲ್ಲಿ ಜನರು ನೀಡಿರುವ ತೀರ್ಪನ್ನು ಗೌರವಿಸಬೇಕು.–ಶಶಿ ತರೂರ್, ಕಾಂಗ್ರೆಸ್ ಸಂಸದ
ದೇವರ ಸ್ವಂತ ನಾಡು ಕೇರಳದಲ್ಲಿ ದೇವರ ಕೃಪೆ ಬಿಜೆಪಿ ಮತ್ತು ಎನ್‌ಡಿಎ ಮೇಲೆ ಹರಿದು ಬಂದಿದೆ ಎಂದು ನಾನು ಹೇಳಬಲ್ಲೆ–ಸುಧಾಂಶು ತ್ರಿವೇದಿ, ಬಿಜೆಪಿ ರಾಷ್ಟ್ರೀಯ ವಕ್ತಾರ
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ಪಕ್ಷಕ್ಕೆ ಅನಿರೀಕ್ಷಿತ ಹಿನ್ನಡೆ ಆಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ತೆಗೆದುಕೊಳ್ಳುತ್ತೇವೆ–ಎಂ.ವಿ ಗೋವಿಂದನ್, ಸಿಪಿಎಂ ರಾಜ್ಯ ಕಾರ್ಯದರ್ಶಿ
ಕೇರಳದ ರಾಜಧಾನಿ, ಎಲ್‌ಡಿಎಫ್‌ನ ಭದ್ರಕೋಟೆ ಎನಿಸಿದ್ದ ತಿರುವನಂತಪುರ ದಲ್ಲಿ ಕಮಲ ಅರಳಿದೆ. 45 ವರ್ಷಗಳಿಂದ ಎಲ್‌ಡಿಎಫ್ ಆಡಳಿತದಲ್ಲಿದ್ದ ತಿರುವನಂತಪುರ ಪಾಲಿಕೆ ಬಿಜಿಪಿ ವಶಕ್ಕೆ ಬಂದಿದೆ. 101 ಸದಸ್ಯ ಬಲದ ಪಾಲಿಕೆ ಯಲ್ಲಿ 50 ಸ್ಥಾನಗಳಲ್ಲಿ ಬಿಜೆಪಿ, 29 ಸ್ಥಾನಗಳಲ್ಲಿ ಎಲ್‌ಡಿಎಫ್, 19 ಸ್ಥಾನಗಳಲ್ಲಿ ಯುಡಿಎಫ್ ಮತ್ತು 2 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಹುಮತಕ್ಕಾಗಿ ಬಿಜೆಪಿಗೆ ಒಂದು ನಿರ್ಣಾಯಕ ಸ್ಥಾನದ ಕೊರತೆ ಇದೆ.
ತಿರುವನಂತಪುರ ಪಾಲಿಕೆಯನ್ನು ವಶಕ್ಕೆ ಪಡೆಯುವ ಮೂಲಕ 2026ರ ಕೇರಳ ವಿಧಾನಸಭೆ ಚುನಾವಣೆಗೆ ಬಿಜೆಪಿ ವೇದಿಕೆ ಸಜ್ಜುಗೊಳಿಸಿದೆ. ಪಾಲಕ್ಕಾಡ್ ಪಾಲಿಕೆಯನ್ನು ಉಳಿಸಿಕೊಂಡು ಯುಡಿಎಫ್ ವಶದಲ್ಲಿದ್ದ ತ್ರಿಪ್ಪೂಣಿತ್ತುರ ನಗರಸಭೆಯನ್ನೂ ವಶಕ್ಕೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ತಿರುವನಂತಪುರ ಪಾಲಿಕೆಯಲ್ಲಿ ಕಮಲ ಅರಳಿದ ಬೆನ್ನಲ್ಲೇ, ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಆರ್. ಶ್ರೀಲೇಖಾ (65) ಈ ನಗರದ ಮೇಯರ್ ಆಗಲಿದ್ದಾರೆಯೇ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ತಿರುವನಂತಪುರ ಪಾಲಿಕೆಯ ಶಾಸ್ತಮಂಗಲಂ ವಿಭಾಗದಿಂದ ಜಯಗಳಿಸಿರುವ ಶ್ರೀಲೇಖಾ ಅವರನ್ನು, ಬಿಜೆಪಿಯು ಮೇಯರ್ ಅಭ್ಯರ್ಥಿ ಎಂದೇ ಬಿಂಬಿಸಿ ಚುನಾವಣಾ ಕಣಕ್ಕಿಳಿಸಿತ್ತು. ‘ನನ್ನನ್ನು ಗೆಲ್ಲಿಸಿರುವ ಮತದಾರರಿಗೆ ಧನ್ಯವಾದಗಳು. ಮೇಯರ್ ಆಯ್ಕೆಯ ವಿಚಾರವು ಪಕ್ಷಕ್ಕೆ ಬಿಟ್ಟಿದ್ದು’ ಎಂದು ಶ್ರೀಲೇಖಾ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.