ತಿರುವನಂತಪುರ: ರಾಜಭವನದಲ್ಲಿ ಗುರುವಾರ ಸಮಾರಂಭವೊಂದರ ಮಧ್ಯೆಯೇ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ದಿಢೀರನೆ ಹೊರನಡೆದರು.
ರಾಜಭವನದಲ್ಲಿ ಭಾರತಮಾತೆಯ ಫೋಟೊ ಇರಿಸಿದ್ದನ್ನು ಖಂಡಿಸಿ ಹೀಗೆ ಮಾಡಿದ್ದಾಗಿ ಶಿವನ್‌ಕುಟ್ಟಿ ತಿಳಿಸಿದರಲ್ಲದೆ, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಟೀಕಿಸಿದರು.
ಇದು ಶಿಷ್ಟಾಚಾರ ಉಲ್ಲಂಘನೆ ಎಂದು ರಾಜಭವನವು ಹೇಳಿಕೆ ಬಿಡುಗಡೆ ಮಾಡಿದೆ.
ಭಾರತಮಾತೆ ಹಾಗೂ ಆರ್‌ಎಸ್‌ಎಸ್ ಮುಖಂಡರ ಫೋಟೊಗಳನ್ನು ರಾಜಭವನದಲ್ಲಿ ಪ್ರದರ್ಶಿಸುವುದನ್ನು ಬುಧವಾರವಷ್ಟೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದರು. ರಾಜಭವನಕ್ಕೆ ಘನತೆ ಇದ್ದು, ಅದನ್ನು ಆರ್‌ಎಸ್‌ಎಸ್ ಶಾಖೆಯ ಮಟ್ಟಕ್ಕೆ ಇಳಿಸಕೂಡದು ಎಂದು ಟೀಕಿಸಿದ್ದರು. ಅದರ ಬೆನ್ನಲ್ಲೇ, ಸಮಾರಂಭದ ನಡುವೆಯೇ ಶಿಕ್ಷಣ ಸಚಿವರು ಹೊರನಡೆದ ಪ್ರಸಂಗಕ್ಕೆ ರಾಜ್ಯಪಾಲರು ಸಾಕ್ಷಿಯಾಗಿದ್ದಾರೆ.
ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಾಧಕರಿಗೆ ಪ್ರಶಸ್ತಿ ವಿತರಿಸುವ ಸಮಾರಂಭ ಅದಾಗಿತ್ತು. ತಾವು ಹೊರನಡೆಯಲು ಕಾರಣ ಏನು ಎಂಬ ತಿಳಿಸುವ ಸೌಜನ್ಯವನ್ನೂ ಶಿವನ್‌ಕುಟ್ಟಿ ತೋರಲಿಲ್ಲ ಎಂದು ರಾಜಭವನದ ಪ್ರಕಟಣೆ ಉಲ್ಲೇಖಿಸಿದೆ.
ಗಣ್ಯರು ಉಪಸ್ಥಿತರಿದ್ದ ಸಮಾರಂಭದಲ್ಲಿ ದಿಢೀರನೆ ಶಿಕ್ಷಣ ಮಂತ್ರಿಯೇ ನಡೆದುಹೋಗುವುದು ತಪ್ಪು ಸಂದೇಶ ರವಾನಿಸುತ್ತದೆ–ಕೇರಳ ರಾಜಭವನದ ಪ್ರಕಟಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.