ADVERTISEMENT

ಚೆಕ್‌ಗಾಗಿ ಪತಿಯಿಂದ ಹಿಂಸೆ: ಕೇರಳ ನಟಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 4:43 IST
Last Updated 14 ಮೇ 2022, 4:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಯಿಕ್ಕೋಡ್‌: ಇಲ್ಲಿಗೆ ಸಮೀಪದ ಪರಂಬಿಲ್ ಬಜಾರ್‌ನಲ್ಲಿರುವ ಮನೆಯಲ್ಲಿ ಕೇರಳದ ನಟಿ ಹಾಗೂ ರೂಪದರ್ಶಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 20 ವರ್ಷದ ಶಹನಾ ಮೃತಪಟ್ಟವರು. ಈ ಸಂಬಂಧ ಅವರ ಪತಿ ಸಜ್ಜದ್‌ (31) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆಎಂದು ಪೊಲೀಸರು ತಿಳಿಸಿದ್ದಾರೆ

ಮನೆಯ ಕಿಟಕಿ ಸರಳುಗಳಿಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಶಹನಾ ಶವ ಗುರುವಾರ ರಾತ್ರಿ ಪತ್ತೆಯಾಗಿದೆ. ಪ್ರಕರಣದ ಸುತ್ತ ಸಾಕಷ್ಟು ಅನುಮಾನಗಳು ಮೂಡಿವೆ.

'ಶಹನಾ ಗುರುವಾರ ಸಂಜೆ ನಮ್ಮನ್ನು ಸಂಪರ್ಕಿಸಿದ್ದಳು. ಅಂದು ಆಕೆಯ 20ನೇ ವರ್ಷದ ಹುಟ್ಟಿದ ದಿನವಾಗಿತ್ತು. ಜನ್ಮದಿನದ ಸಂಭ್ರಮಾಚರಣೆಗಾಗಿ ತಾನು ಮನೆಗೆ ಬರುವುದಾಗಿ ಹೇಳಿದ್ದಳು. ತುಂಬಾ ಸಂತೋಷದಿಂದ ಮಾತನಾಡಿದ್ದಳು. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅನಿಸುತ್ತಿಲ್ಲ' ಎಂದು ಶಹನಾ ತಾಯಿ ವುವೆಯ್ಮ ಹೇಳಿರುವುದಾಗಿ 'ಮಾತೃಭೂಮಿ' ಪತ್ರಿಕೆ ವರದಿ ಮಾಡಿದೆ.

ADVERTISEMENT

ಪತಿ ಸಜ್ಜದ್‌, ಶಹನಾರನ್ನು ಕೊಲೆ ಮಾಡಿರಬಹುದು ಎಂದುವುವೆಯ್ಮ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಜಾಹೀರಾತೊಂದಕ್ಕೆ ಸಂಬಂಧಿಸಿದಂತೆ ಶಹನಾ ಪಡೆದುಕೊಂಡಿದ್ದ ಚೆಕ್‌ ಅನ್ನು ತನಗೆ ನೀಡದಿದ್ದರೆ, ಕೊಲೆ ಮಾಡುವುದಾಗಿ ಸಜ್ಜದ್ ಬೆದರಿಕೆ ಹಾಕಿದ್ದರು ಎಂದು ಸಹ ಆರೋಪಿಸಿದ್ದಾರೆ.

ಶಹನಾ ಅವರು ತಮ್ಮ ಸಂಬಂಧಿಯೇ ಆಗಿರುವ ಸಜ್ಜದ್‌ ಅವರನ್ನು ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು.ಸಜ್ಜದ್‌ ಕೋಯಿಕೋಡ್‌ನವರು. ಮದುವೆಯಾದ ಸಂದರ್ಭದಲ್ಲಿ ಸಜ್ಜದ್ ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದರು.ಶಹನಾ ಮದುವೆಯಾದ ಬಳಿಕ ಮಾಡೆಲಿಂಗ್ ಆರಂಭಿಸಿದ್ದರು. ತಮಿಳು ಸಿನಿಮಾದಲ್ಲಿಯೂ ನಟಿಸಿದ್ದರು. ಶಹನಾ ಸಂಪಾದಿಸಲು ಶುರುಮಾಡಿದ ನಂತರ ಸಜ್ಜದ್, ಕತಾರ್‌ಗೆ ಮರಳಲು ನಿರಾಕರಿಸಿದ್ದ. ಅಷ್ಟಲ್ಲದೆ, ಶಹನಾ ದುಡಿದ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದ ಎಂದೂವುವೆಯ್ಮ ಮಾಹಿತಿ ನೀಡಿದ್ದಾರೆ.

25 ಸವರಿನ್‌ನಷ್ಟು ಚಿನ್ನಾಭರವಣವನ್ನು ವರದಕ್ಷಿಣೆಯಾಗಿ ನೀಡಬೇಕೆಂದು ಸಜ್ಜದ್‌ ಕುಟುಂಬವರು ಬೇಡಿಕೆ ಇಟ್ಟಿದ್ದರು. ಮದುವೆಯಾದ ಬಳಿಕವೂ ಸಜ್ಜದ್‌, ಹಣಕ್ಕಾಗಿ ಶಹನಾ ಮನೆಯವರನ್ನು ಪೀಡಿಸುತ್ತಿದ್ದ. ಶಹನಾ ಅವರ ತಾಯಿ ತಮ್ಮ ಮನೆಗೆ ಬರದಂತೆಯೂ ಮಾಡಿದ್ದರು ಎಂದುಶಹನಾ ಅವರ ಸಂಬಂಧಿಕರು ಆರೋಪಿಸಿದ್ದಾರೆ.

ಸಜ್ಜದ್‌ ಕುಟುಂಬದವರ ವಿರುದ್ಧ ಶಹನಾ ಅವರ ತಾಯಿ, 'ಕಿರುಕುಳ, ಕೊಲೆ' ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಇದರ ಆಧಾರದಲ್ಲಿ ಸಜ್ಜದ್‌ ಅವರನ್ನು ಕೇರಳ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

'ಮಾಡಲಿಂಗ್‌ ಸಂಬಂಧವಾಗಿ ಪಡೆದುಕೊಂಡಿದ್ದ ಚೆಕ್‌ವೊಂದರ ವಿಚಾರವಾಗಿ ಇಬ್ಬರೂ (ಶಹನಾ, ಸಜ್ಜದ್‌) ಜಗಳವಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಶಹನಾ ತಾವಾಗಿಯೇ ನೇಣು ಬಿಗಿದುಕೊಂಡಿದ್ದಾರೆ ಎಂದು ಸಜ್ಜದ್ ಹೇಳಿಕೆ ನೀಡಿದ್ದಾರೆ. ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ' ಎಂದು ಎಸಿಪಿ ಸುದರ್ಶನ್‌ ಮಾಧ್ಯಮದವರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.