ADVERTISEMENT

ತಿರುವನಂತಪುರ ವಿಮಾನ ನಿಲ್ದಾಣ 'ಅದಾನಿ'ಗೆ ವಹಿಸಿದ್ದರ ವಿರುದ್ಧ ಕೇರಳ ಸುಪ್ರೀಂಗೆ

ಪಿಟಿಐ
Published 24 ನವೆಂಬರ್ 2020, 14:50 IST
Last Updated 24 ನವೆಂಬರ್ 2020, 14:50 IST
ಕೇರಳದ ಕಣ್ಣೂರು ವಿಮಾನ ನಿಲ್ದಾಣದ ಚಿತ್ರ (ಪಿಟಿಐ ಚಿತ್ರ)
ಕೇರಳದ ಕಣ್ಣೂರು ವಿಮಾನ ನಿಲ್ದಾಣದ ಚಿತ್ರ (ಪಿಟಿಐ ಚಿತ್ರ)   

ನವದೆಹಲಿ: ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು 'ಅದಾನಿ ಎಂಟರ್‌ಪ್ರೈಸಸ್‌'ಗೆ ಗುತ್ತಿಗೆ ನೀಡುವ ಕೇಂದ್ರದ ನಿರ್ಧಾರದ ವಿರುದ್ಧ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ.

ಇದಕ್ಕೂ ಮೊದಲು ಎಲ್‌ಡಿಎಫ್‌ ಸರ್ಕಾರ ಕೇರಳ ಹೈಕೋರ್ಟ್‌ ಮೆಟ್ಟಿಲೇರಿತ್ತು. ಆದರೆ, 'ರಾಜ್ಯ ಸರ್ಕಾರದ ಅರ್ಜಿಯು ಕೇಂದ್ರದ ಖಾಸಗೀಕರಣದ ನೀತಿಗಳ ವಿರುದ್ಧವಾಗಿದೆ. ಅಲ್ಲದೆ, ಈ ಅರ್ಜಿಯಲ್ಲಿ ಪ್ರಾಮುಖ್ಯತೆ ಇಲ್ಲ,' ಎಂದು ಅದನ್ನು ತಳ್ಳಿ ಹಾಕಿತ್ತು. ಕೇರಳ ಹೈಕೋರ್ಟ್‌ನ ಈ ತೀರ್ಪನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ.

ಹೈಕೋರ್ಟ್ ತೀರ್ಪಿನ ಮಧ್ಯಂತರ ತಡೆ ಕೋರಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ವಾದಿಸಲು ವಕೀಲ ಸಿ. ಕೆ. ಶಸಿ ಅವರನ್ನು ನಿಯೋಜಿಸಲಾಗಿದೆ.

ADVERTISEMENT

'ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಸಂಸ್ಥೆ ಅದಾನಿ ಎಂಟರ್‌ಪ್ರೈಸಸ್‌ಗೆ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ಪ್ರಯತ್ನದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಅನಿಯಂತ್ರಿತ ಮತ್ತು ಕಾನೂನುಬಾಹಿರ ಕ್ರಮಕ್ಕೆ ಕೈ ಹಾಕಿದೆ,' ಎಂದು ಶಶಿ ಅಭಿಪ್ರಾಯಪಟ್ಟಿದ್ದಾರೆ.

ಸರ್ವಪಕ್ಷ ಸಭೆ ನಡೆಸಿದ ನಂತರ ಕೇರಳ ಸರ್ಕಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅಲ್ಲದೆ, ವಿಮಾನ ನಿಲ್ದಾಣವನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡುವ ಕೇಂದ್ರ ಸಚಿವ ಸಂಪುಟ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಆ ಸಭೆಯಲ್ಲಿ ಒತ್ತಾಯಿಸಲಾಗಿತ್ತು.

ಲಖನೌ, ಜೈಪುರ, ಗುವಾಹಟಿ, ತಿರುವನಂತಪುರ, ಮಂಗಳೂರು, ಅಹಮದಾಬಾದ್‌ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಕೇಂದ್ರದ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಯೋಜನೆ ಅಡಿಯಲ್ಲಿ ತನ್ನ ಸುಪರ್ದಿಗೆ ಪಡೆದುಕೊಳ್ಳುವಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.