ADVERTISEMENT

ನಿಮಿಷಾಗೆ ಗಲ್ಲು | ಇತರ ರಾಷ್ಟ್ರಗಳಂತೆ ಯೆಮೆನ್ ಅಲ್ಲ ಎಂದು ಕೈಚೆಲ್ಲಿದ ಕೇಂದ್ರ

‘ಸಾಧ್ಯವಾಗುವುದನ್ನೆಲ್ಲ ಮಾಡುತ್ತಿದ್ದೇವೆ, ಹೆಚ್ಚು ಏನನ್ನೂ ಮಾಡಲಾಗದು’

ಪಿಟಿಐ
Published 14 ಜುಲೈ 2025, 12:34 IST
Last Updated 14 ಜುಲೈ 2025, 12:34 IST
   

ನವದೆಹಲಿ: ಯೆಮನ್‌ನಲ್ಲಿ ಸ್ಥಳೀಯ ಪ್ರಜೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್‌ ನಿಮಿಷ ಪ್ರಿಯಾ ಅವರನ್ನು ರಕ್ಷಿಸುವುದಕ್ಕಾಗಿ ಸಾಧ್ಯವಾಗುವುದೆಲ್ಲವನ್ನೂ ಮಾಡಲಾಗುತ್ತಿದೆ. ಆದರೆ, ಯೆಮನ್‌ನಲ್ಲಿ ಪರಿಸ್ಥಿತಿ ಸರಿ ಇಲ್ಲದಿರುವುದರಿಂದ ಅದಕ್ಕಿಂತ ಹೆಚ್ಚು ಏನನ್ನೂ ಮಾಡಲಾಗದು ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ಯೆಮನ್‌ ಆಡಳಿತ ಬುಧವಾರ (ಜುಲೈ 16) ನಿಮಿಷ ಪ್ರಿಯಾ ಅವರಿಗೆ ಮರಣ ದಂಡನೆ ಜಾರಿ ಮಾಡಲಿದೆ. 

‘ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ಒಂದು ನಿರ್ದಿಷ್ಟ ಹಂತದವರೆಗೆ ಹೋಗಬಹುದು. ನಾವು ಈಗಾಗಲೇ  ಆ ಹಂತವನ್ನು ತಲುಪಿದ್ದೇವೆ’ ಎಂದು ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರು ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು. 

ADVERTISEMENT

ಯೆಮನ್‌ನಲ್ಲಿರುವ ಹುಥಿ ಬಂಡುಕೋರ ಸಂಘಟನೆಯ ಬಗ್ಗೆ ಪ್ರಸ್ತಾಪಿಸಿದ ಅಟಾರ್ನಿ ಜನರಲ್‌, ಆ ಸಂಘಟನೆಯನ್ನು ರಾಜತಾಂತ್ರಿಕವಾಗಿಯೂ ಮಾನ್ಯತೆ ನೀಡಿಲ್ಲ ಎಂದರು. 

ತನ್ನ ಪ್ರಜೆಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದ್ದು ನಿಮಿಷ ಪ್ರಿಯಾ ವಿಚಾರದಲ್ಲಿ ಏನೆಲ್ಲಾ ಮಾಡಬಹುದೋ ಅದನ್ನೆಲ್ಲ ಮಾಡುತ್ತಿದೆ.
ಆರ್‌.ವೆಂಕಟರಮಣಿ, ಅಟಾರ್ನಿ ಜನರಲ್‌

‘ಕೇಂದ್ರ ಸರ್ಕಾರವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಸದ್ಯದ ಮಟ್ಟಿಗೆ ಗಲ್ಲು ಶಿಕ್ಷೆ ಜಾರಿಯನ್ನು ಅಮಾನತಿನಲ್ಲಿಡಲು ಸಾಧ್ಯವಾಗುವಂತಹ ದಾರಿಯನ್ನು ಪತ್ತೆ ಮಾಡುವಂತೆ ಆ ಪ್ರದೇಶದ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗೆ ಸರ್ಕಾರ ಇತ್ತೀಚೆಗೆ ಪತ್ರವನ್ನೂ ಬರೆದಿತ್ತು. ಯೆಮನ್‌ನಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಕೆಲವು ಶೇಖ್‌ಗಳ ಜೊತೆಗೆ ಮಾತುಕತೆಯನ್ನೂ ನಡೆಸಿದೆ’ ಎಂದೂ ಅವರು ಮಾಹಿತಿ ನೀಡಿದರು. 

ಗಲ್ಲು ಶಿಕ್ಷೆಗೆ ಗುರಿಯಾಗಿರುವ 38 ವರ್ಷದ ನಿಮಿಷ ಪ್ರಿಯಾ ಅವರನ್ನು ರಕ್ಷಿಸುವುದಕ್ಕೆ ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ‘ಸೇವ್‌ ನಿಮಿಷ ಪ್ರಿಯಾ–ಇಂಟರ್‌ನ್ಯಾಷನಲ್‌ ಆ್ಯಕ್ಷನ್‌ ಕೌನ್ಸಿಲ್‌’ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಿಚಾರಣೆ ನಡೆಸಿತು. 

ಕೇರಳದ ಪಾಲಕ್ಕಾಡ್‌ ಜಿಲ್ಲೆಯ ನಿಮಿಷ ಪ್ರಿಯಾ ಅವರು 2017ರಲ್ಲಿ ಯೆಮನ್‌ನಲ್ಲಿ ತನ್ನ ಕ್ಲಿನಿಕ್‌ ಪಾಲುದಾರನಾಗಿದ್ದ ಅಲ್ಲಿನ ಪ್ರಜೆಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. 2020ರಲ್ಲಿ ಕೆಳ ಹಂತದ ನ್ಯಾಯಾಲಯ ಅವರಿಗೆ ಮರಣ ದಂಡನೆ ವಿಧಿಸಿ ಆದೇಶಿಸಿತ್ತು. ಅವರ ಮೇಲ್ಮನವಿಯನ್ನು ಅಲ್ಲಿನ ಸುಪ್ರೀಂ ಕೋರ್ಟ್‌ 2023ರಲ್ಲಿ ವಜಾ ಮಾಡಿತ್ತು. 

ಅರ್ಜಿಯ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿದ ನ್ಯಾಯಪೀಠ, ಪ್ರಕರಣದ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡುವಂತೆ ಅಟಾರ್ನಿ ಜನರಲ್‌ ಮತ್ತು ಅರ್ಜಿದಾರರ ವಕೀಲರಿಗೆ ತಿಳಿಸಿತು. 

‘ಶಿಕ್ಷೆ ತಪ್ಪಿಸಲು ಇರುವುದೊಂದೇ ದಾರಿ’

ಅರ್ಜಿದಾರ ಸಂಘಟನೆ ಪರವಾಗಿ ವಾದ ಮಾಡಿದ ವಕೀಲರು ‘ಪ್ರಿಯಾ ಅವರ ತಾಯಿ ಯೆಮನ್‌ನಲ್ಲಿದ್ದು ಸಾಮಾಜಿಕ ಕಾರ್ಯಕರ್ತರೊಬ್ಬರೊಂದಿಗೆ ಕ್ಷಮಾ ಪರಿಹಾರ ಮೊತ್ತದ (ಬ್ಲಡ್‌ ಮನಿ) ವಿಚಾರವಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆತನ ಕುಟುಂಬವು ಕ್ಷಮಾ ಪರಿಹಾರ ಮೊತ್ತವನ್ನು ಸ್ವೀಕರಿಸಲು ಒಪ್ಪಿದರೆ ಮಾತ್ರ ಮರಣ ದಂಡನೆಯನ್ನು ತಪ್ಪಿಸಲು ಸಾಧ್ಯ. ಕುಟುಂಬದವರು ಸರ್ಕಾರದಿಂದ ಹಣ ಕೇಳುತ್ತಿಲ್ಲ. ಆ ಮೊತ್ತವನ್ನು ಅವರೇ ಹೊಂದಿಸಿಕೊಳ್ಳಲಿದ್ದಾರೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು. 

‘ಪರಿಹಾರ ಮೊತ್ತವಾಗಿ ನೀಡಬೇಕಾದ ಮೊತ್ತವನ್ನು ಕುಟುಂಬವೇ ಹೊಂದಿಸಲಿದೆ ಎಂದು ಅರ್ಜಿದಾರರು ಹೇಳುತ್ತಾರೆ. ಯೆಮನ್‌ ಆಡಳಿತದೊಂದಿಗೆ ಮಾತುಕತೆ ನಡೆಸುವ ದಾರಿಯದ್ದೇ ಇಲ್ಲಿನ ಪ್ರಶ್ನೆಯಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. 

ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟರಮಣಿ ‘ಯೆಮನ್‌ ಜಗತ್ತಿನ ಇತರ ದೇಶಗಳಂತಲ್ಲ. ಸರ್ಕಾರವು ರಾಜತಾಂತ್ರಿಕ ಪ್ರಕ್ರಿಯೆ ಮೂಲಕ ಅಥವಾ ಎರಡೂ ಸರ್ಕಾರಗಳ ನಡುವೆ ಮಾತುಕತೆಗೆ ಆಹ್ವಾನಿಸುವುದು ಸುಲಭವಲ್ಲ. ಅದು ತುಂಬಾ ಸಂಕೀರ್ಣ. ಈ ವಿಚಾರವನ್ನು ಸಾರ್ವಜನಿಕಗೊಳಿಸುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಬಿಗಾಡಿಸುವುದನ್ನು ನಾವು ಬಯಸುವುದಿಲ್ಲ’ ಎಂದು ಹೇಳಿದರು. 

ಶಿಕ್ಷೆ ಅಮಾನತಿನಲ್ಲಿ: ಅನಧಿಕೃತ ಮಾಹಿತಿ

‘ಗಲ್ಲು ಶಿಕ್ಷೆ ಜಾರಿಯನ್ನು ಅಮಾನತಿನಲ್ಲಿಡಲಾಗಿದೆ ಎಂಬ ಮಾಹಿತಿ ಅನೌಪಚಾರಿಕ ಮೂಲಗಳಿಂದ ತಿಳಿದು ಬಂದಿದೆ. ಆದರೆ ಇದು ಎಷ್ಟರ ಪಟ್ಟಿಗೆ ಸತ್ಯ ಎನ್ನುವುದು ನಮಗೆ ಖಾತರಿ ಇಲ್ಲ. ‌ಯೆಮನ್‌ನಲ್ಲಿ ನಿಜಕ್ಕೂ ಏನಾಗುತ್ತಿದೆ ಎನ್ನುವುದು ಸರ್ಕಾರಕ್ಕೆ ತಿಳಿದಿಲ್ಲ’ ಎಂದು ಅಟಾರ್ನಿ ಜನರಲ್‌ ವೆಂಕಟರಮಣಿ ನ್ಯಾಯಪೀಠಕ್ಕೆ ತಿಳಿಸಿದರು.

ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ನೇತೃತ್ವದಲ್ಲಿ ಮಧ್ಯಸ್ಥಿಕೆ

ಕೋಯಿಕ್ಕೋಡ್‌: ನಿಮಿಷ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಗುರು ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಮಧ್ಯಪ್ರವೇಶಿಸಿದ್ದಾರೆ. ‌

ಶೇಕ್‌ ಅಬೂಬಕ್ಕರ್ ಅವರು ಯೆಮೆನ್‌ನಲ್ಲಿರುವ ಧಾರ್ಮಿಕ ಮುಖಂಡ ಶೇಕ್‌ ಹಬೀರ್‌ ಉಮರ್‌ ನೇತೃತ್ವದಲ್ಲಿ ಸಭೆ ನಡೆಸಿದ್ದು, ಇದರಲ್ಲಿ ಮಹ್ದಿ ಕುಟುಂಬದ ಸದಸ್ಯರು ಭಾಗವಹಿಸಿದ್ದಾರೆ. ನಿಮಿಷಾ ಮಾಡಿದ ತಪ್ಪನ್ನು ಕ್ಷಮಿಸುವುದಕ್ಕಾಗಿ ಸಂತ್ರಸ್ತರು ಅಥವಾ ಅವರ ಕುಟುಂಬದವರಿಗೆ ಪ್ರಕರಣದ ಆರೋಪಿಗಳು ಪರಿಹಾರದ ರೂಪದಲ್ಲಿ ನೀಡುವ ಮೊತ್ತ ‘ಬ್ಲಡ್‌ ಮನಿ’ ನೀಡುವ ಕುರಿತು ಮಾತುಕತೆಗಳು ನಡೆಯುತ್ತಿವೆ. ಆದರೆ, ಈ ಕುರಿತು ಇದುವರೆಗೂ ಅಧಿಕೃತ ಸಂದೇಶವು ಪ್ರಕಟಗೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.