ನಿಮಿಷಾ ಪ್ರಿಯಾ
ನವದೆಹಲಿ: ಕೇರಳದ ನರ್ಸ್ ನಿಮಿಷ ಪ್ರಿಯಾ ಅವರಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯ ಜಾರಿಯನ್ನು ಯೆಮೆನ್‌ನ ಅಧಿಕಾರಿಗಳು ಮುಂದೂಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಜುಲೈ 16ರಂದು (ಬುಧವಾರ) ಅವರಿಗೆ ಗಲ್ಲುಶಿಕ್ಷೆ ಜಾರಿಗೊಳಿಸುವುದು ನಿಗದಿಯಾಗಿತ್ತು. 2017ರಲ್ಲಿ ಯೆಮೆನ್‌ನ ನಾಗರಿಕ ತಲಾಲ್ ಅಬ್ದೋ ಮಹ್ದಿ ಹತ್ಯೆ ಮಾಡಿದ ಆರೋಪದ ಮೇಲೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್‌ನ ನಿವಾಸಿ ನಿಮಿಷಾ ಪ್ರಿಯಾ ಅವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು.
ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಮುಂದೂಡಿಕೆ ಬಗ್ಗೆ ಅಧಿಕೃತ ಪ್ರಕಟಣೆ
ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಅವರು ತನ್ನ ಕ್ಲಿನಿಕ್ ಪಾಲುದಾರನಾಗಿದ್ದ ಯೆಮೆನ್ ದೇಶದ ಪ್ರಜೆ ತಲಾಲ್ ಅಬ್ದು ಮಹ್ದಿ ಎಂಬವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. 2017ರಲ್ಲಿ ಕೊಲೆ ಪ್ರಕರಣ ನಡೆದಿತ್ತು.
ಯೆಮೆನ್‌ನ ವಿಚಾರಣಾ ನ್ಯಾಯಾಲಯ 2020ರಲ್ಲಿ ನಿಮಿಷಾ ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಯೆಮೆನ್‌ನ ‘ಸುಪ್ರೀಂ ಜುಡಿಷಿಯಲ್ ಕೌನ್ಸಿಲ್’ 2023ರ ನವೆಂಬರ್‌ನಲ್ಲಿ ಈ ಶಿಕ್ಷೆ ಎತ್ತಿ ಹಿಡಿದಿತ್ತು.
‘ಯೆಮೆನ್‌ನ ಸ್ಥಳೀಯ ಅಧಿಕಾರಿಗಳು ಜುಲೈ 16ರಂದು ನಿಗದಿಯಾಗಿದ್ದ ಗಲ್ಲುಶಿಕ್ಷೆ ಜಾರಿಯನ್ನು ಮುಂದೂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ನಿಮಿಷಾ ಮಾಡಿದ ತಪ್ಪನ್ನು ಕ್ಷಮಿಸುವುದಕ್ಕಾಗಿ ಸಂತ್ರಸ್ತರು ಅಥವಾ ಅವರ ಕುಟುಂಬದವರಿಗೆ ಪ್ರಕರಣದ ಆರೋಪಿಗಳು ಪರಿಹಾರದ ರೂಪದಲ್ಲಿ ನೀಡುವ ಮೊತ್ತ ‘ಬ್ಲಡ್ ಮನಿ’ ನೀಡುವ ಕುರಿತು ಭಾರತದ ಕಡೆಯಿಂದ ಮಾತುಕತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
38 ವರ್ಷದ ನಿಮಿಷಾ ಸದ್ಯ ಯೆಮೆನ್‌ನ ರಾಜಧಾನಿ ಸನಾ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಈ ನಗರವು ಇರಾನ್ ಬೆಂಬಲಿತ ಹುಥಿ ಬಂಡುಕೋರರ ಹಿಡಿತದಲ್ಲಿದೆ.
ಗಲ್ಲುಶಿಕ್ಷೆ ಮುಂದೂಡಿಕೆಯಾಗಿರುವುದು ಸಂತಸ ಹಾಗೂ ಸಮಾಧಾನ ತಂದಿದೆ. ಶಿಕ್ಷೆ ತಡೆದು ಸುರಕ್ಷಿತವಾಗಿ ಭಾರತಕ್ಕೆ ಮರಳಿ ತರುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳು ಮುಂದುವರಿಯಲಿವೆಟಾಮಿ ಥೋಮಸ್ ನಿಮಿಷಾ ಪ್ರಿಯಾ ಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.