ಆರ್‌ಎಸ್‌ಎಸ್ (ಪ್ರಾತಿನಿಧಿಕ ಚಿತ್ರ)
ನವದೆಹಲಿ: ಕೇರಳದ ಕೊಟ್ಟಾಯಂ ಜಿಲ್ಲೆಯ ಐಟಿ ಉದ್ಯೋಗಿ ಆನಂದು ಅಜಿ (26) ಆತ್ಮಹತ್ಯೆ ಪ್ರಕರಣ ಮತ್ತು ಸಾವಿನ ನಂತರ ಈ ಯುವಕನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟವಾದ ಬರಹವೊಂದು ಅಲ್ಲಿನ ರಾಜಕೀಯ ವಲಯದಲ್ಲಿ ಭಾರಿ ವಾಕ್ಸಮರ ಹುಟ್ಟುಹಾಕಿದೆ.
‘ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕ್ಯಾಂಪ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ, ಈ ಮಾನಸಿಕ ಆಘಾತದಿಂದ ದೀರ್ಘಾವಧಿ ಖಿನ್ನತೆಯಿಂದ ಬಳಲುತ್ತಿದ್ದೆ’ ಎಂದು ಆರೋಪಿಸಲಾಗಿರುವ ಇನ್‌ಸ್ಟಾಗ್ರಾಂ ಪೋಸ್ಟ್, ರಾಜಕೀಯ ತಿರುವು ಸೃಷ್ಟಿಸಿದೆ.
ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ‘ಆರ್‌ಎಸ್‌ಎಸ್’ ಹೆಸರನ್ನು ಹಲವು ಬಾರಿ ಉಲ್ಲೇಖಿಸಿದ್ದರೂ, ಎಫ್‌ಐಆರ್‌ನಲ್ಲಿ ‘ಆರ್‌ಎಸ್‌ಎಸ್’ ಹೆಸರನ್ನು ಸೇರ್ಪಡೆ ಮಾಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್, ಕೇಂದ್ರ ಸರ್ಕಾರ ಮತ್ತು ಕೇರಳದ ಎಲ್‌ಡಿಎಫ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ.
‘ಆನಂದು ಅಜಿ ಆತ್ಮಹತ್ಯೆ ಪ್ರಕರಣಕ್ಕೆ ಕಾಂಗ್ರೆಸ್ ರಾಜಕೀಯ ಬಣ್ಣ ಕೊಟ್ಟಿದ್ದು, ನೀಚ ರಾಜಕಾರಣ ಮಾಡುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ್ ಹೇಳಿದ್ದಾರೆ.
‘ಆರ್‌ಎಸ್‌ಎಸ್ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಬೇಕು ಮತ್ತು ಆತ್ಮಹತ್ಯೆ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ಮುಖಂಡ ಪವನ್ ಖೇರಾ ಒತ್ತಾಯಿಸಿದ್ದಾರೆ.
‘ಇದೊಂದು ಗಂಭೀರ ವಿಷಯ. ಆರ್‌ಎಸ್‌ಎಸ್ ಬಗ್ಗೆ ಆಡಳಿತವು ಭಯಪಡುತ್ತಿದೆ ಎಂದರೆ ಅದು ನಾಚಿಕೆಗೇಡಿನ ಸಂಗತಿ. ಆರ್‌ಎಸ್‌ಎಸ್‌ನಿಂದ, ಆರ್‌ಎಸ್‌ಎಸ್‌ಗಾಗಿ, ಆರ್‌ಎಸ್‌ಎಸ್‌ಗೋಸ್ಕರ ಇರುವುದೇ ಕೇಂದ್ರ ಸರ್ಕಾರ’ ಎಂದು ಖೇರಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಾವಿನ ನಂತರ ಪ್ರಕಟವಾದ ಪೋಸ್ಟ್
ಕೊಟ್ಟಾಯಂನ ತಂಬಲಕ್ಕಾಡ್ ನಿವಾಸಿ ಆನಂದು ಅಜಿ ಮೃತದೇಹವು, ಅಕ್ಟೋಬರ್ 9ರಂದು ತಿರುವನಂತಪುರದ ಸಮೀಪದ ತಂಬಾನೂರ್‌ನ ಲಾಡ್ಜ್‌ನಲ್ಲಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ, ಅ.10ರಂದು ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ‘ಬಾಲ್ಯದಲ್ಲಿ ‘ಆರ್‌ಎಸ್‌ಎಸ್‌ನ ಕ್ಯಾಂಪ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ. ತಮ್ಮ ಕುಟುಂಬಕ್ಕೆ ಪರಿಚಿತರಾದ ‘ಎನ್.ಎಂ’ ಎಂಬುವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿದ ಪೋಸ್ಟ್ ಪ್ರಕಟವಾಗಿತ್ತು. ಈ ಪೋಸ್ಟ್ ಅನ್ನು ಸಾವಿನ ನಂತರ ಪ್ರಕಟಗೊಳ್ಳುವ ಹಾಗೆ ‘ಸಮಯ ಪೂರ್ವ ನಿಗದಿ’ (ಶಡ್ಯೂಲ್) ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆನಂದು ಅಜಿ, ಪೋಸ್ಟ್‌ನಲ್ಲಿ ಹೇಳಿದ್ದಾರೆ. ಈ ಆರೋಪಗಳ ಸಮಗ್ರ ತನಿಖೆಗೆ ಆರ್‌ಎಸ್‌ಎಸ್ ಅವಕಾಶ ಮಾಡಿಕೊಡಬೇಕುಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ತನಿಖೆಗೆ ಆರ್‌ಎಸ್‌ಎಸ್ ಆಗ್ರಹ
‘ಕೇರಳದ ಟೆಕಿಯ ಅಸಹಜ ಸಾವಿನ ಕುರಿತು ಸಮಗ್ರ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿರುವ ಆರ್‌ಎಸ್‌ಎಸ್, ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಪೋಸ್ಟ್ ‘ಅನುಮಾನಾಸ್ಪದ ಆತ್ಮಹತ್ಯೆ ಪತ್ರ’ ಎಂದು ಹೇಳಿದೆ.
‘ಟೆಕಿ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಇನ್‌ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ಸಂಘದ ವಿರುದ್ಧ ಕೆಲವು ಸಂಶಯಾಸ್ಪದ ಮತ್ತು ಆಧಾರರಹಿತ ಆರೋಪಗಳಿರುವ ಪೋಸ್ಟ್ ಪ್ರಕಟಗೊಂಡಿದೆ. ಇದರ ಬಗ್ಗೆಯೂ ತನಿಖೆ ನಡೆಯಬೇಕು’ ಎಂದು ಆರ್‌ಎಸ್‌ಎಸ್‌ನ ದಕ್ಷಿಣ ಕೇರಳ ಪ್ರಾಂತ ಜಂಟಿ ಕಾರ್ಯದರ್ಶಿ ಕೆ.ಬಿ. ಶ್ರೀಕುಮಾರ್ ಆಗ್ರಹಿಸಿದ್ದಾರೆ.
ಯುವಕನ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯಗಳು ಅನುಮಾನಾಸ್ಪದವಾಗಿವೆ. ಆರ್‌ಎಸ್‌ಎಸ್ ಹೆಸರಿಗೆ ಕಳಂಕ ತರಲು ಕಾಂಗ್ರೆಸ್ ನೀಚ ರಾಜಕಾರಣ ಮಾಡುತ್ತಿದೆಸುಧಾಂಶು ತ್ರಿವೇದಿ, ಬಿಜೆಪಿ ರಾಷ್ಟ್ರೀಯ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.