ADVERTISEMENT

ಕೇರಳದ ಹಲವೆಡೆ ನಾಳೆಯಿಂದ ಲಾಕ್‌ಡೌನ್‌ ಸಡಿಲ: ಎಲ್ಲೆಲ್ಲಿ ಯಾವುದಕ್ಕೆ ವಿನಾಯಿತಿ?

ಹೋಟೆಲ್, ಬಸ್, ವಾಹನ ಸಂಚಾರ, ಕಟ್ಟಡ ಕಾರ್ಮಿಕರಿಗೆ ವಿನಾಯಿತಿ

ಏಜೆನ್ಸೀಸ್
Published 19 ಏಪ್ರಿಲ್ 2020, 11:01 IST
Last Updated 19 ಏಪ್ರಿಲ್ 2020, 11:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಕಾಸರಗೋಡು ಸೇರಿದಂತೆ ಕೋವಿಡ್ ಹಾಟ್‌ಸ್ಪಾಟ್‌ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಏಪ್ರಿಲ್ 20ರಿಂದ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಲು ಕೇರಳ ಸರ್ಕಾರ ಮುಂದಾಗಿದೆ.

ಸೋಂಕಿನ ತೀವ್ರತೆ ಆಧಾರದಲ್ಲಿ ಜಿಲ್ಲೆಗಳನ್ನು 4 ವಲಯಗಳನ್ನಾಗಿ (ರೆಡ್, ಆರೆಂಜ್–ಎ, ಆರೆಂಜ್–ಬಿ ಮತ್ತು ಗ್ರೀನ್) ವಿಭಾಗಿಸಲಾಗಿದೆ. ಈ ಪೈಕಿ ಆರೆಂಜ್–ಬಿ ಮತ್ತು ಗ್ರೀನ್‌ ವಲಯಗಳಲ್ಲಿ ನಾಳೆಯಿಂದ ಲಾಕ್‌ಡೌನ್ ಭಾಗಶಃ ತೆರವಾಗಲಿದೆ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ.

ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ ರೆಡ್ ಝೋನ್ ವ್ಯಾಪ್ತಿಯಲ್ಲಿ ಬರುತ್ತವೆ. ಈ ಜಿಲ್ಲೆಗಳ ಪ್ರವೇಶಕ್ಕೆ ಮತ್ತು ನಿರ್ಗಮನಕ್ಕೆ ಎರಡೇ ಕಡೆ ಅವಕಾಶವಿದ್ದು ಅಗತ್ಯ ವಸ್ತು ಸಾಗಾಟಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ. ಇಲ್ಲಿ ಮೇ 3ರವರೆಗೂ ಲಾಕ್‌ಡೌನ್ ಮುಂದುವರಿಯಲಿದೆ.

ADVERTISEMENT

ಪತ್ತನಂತಿಟ್ಟ, ಎರ್ನಾಕುಳಂ ಮತ್ತು ಕೊಲ್ಲಂ ಆರೆಂಜ್–ಎ ಝೋನ್ ವ್ಯಾಪ್ತಿಯಲ್ಲಿ ಬರುತ್ತವೆ. ಈ ಜಿಲ್ಲೆಗಳಲ್ಲಿ ಏಪ್ರಿಲ್ 24ರವರೆಗೂ ಲಾಕ್‌ಡೌನ್ ಮುಂದುವರಿಯಲಿದ್ದು, ನಂತರ ಭಾಗಶಃ ತೆರವಾಗಲಿದೆ.

ಈ ಜಿಲ್ಲೆಗಳಲ್ಲಿ ಲಾಕ್‌ಡೌನ್ ಭಾಗಶಃ ತೆರವು...

ಆಲಪ್ಪುಳ, ತ್ರಿಶೂರ್, ಪಾಲಕ್ಕಾಡ್, ತಿರುವನಂತಪುರ ಮತ್ತು ವಯನಾಡ್‌ಗಳು ಆರೆಂಜ್–ಬಿ ಝೋನ್ ವ್ಯಾಪ್ತಿಯಲ್ಲಿದ್ದು, ಈ ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್‌ಡೌನ್ ಭಾಗಶಃ ತೆರವಾಗಲಿದೆ. ಇನ್ನು ಗ್ರೀನ್‌ ಝೋನ್ ವ್ಯಾಪ್ತಿಯಲ್ಲಿ ಬರುವ ಕೊಟ್ಟಾಯಂ ಮತ್ತು ಇಡುಕ್ಕಿಯಲ್ಲಿ ಲಾಕ್‌ಡೌನ್ ನಿಯಮಗಳು ಬಹುತೇಕ ತೆರವಾಗಲಿವೆ.

ಆದಾಗ್ಯೂ, ಗ್ರೀನ್‌ ಝೋನ್ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿಯೂ ಸಾಮೂಹಿಕವಾಗಿ ಒಂದೆಡೆ ಸೇರುವುದು, ಉತ್ಸವ, ಧಾರ್ಮಿಕ ಆಚರಣೆ, ಶೈಕ್ಷಣಿಕ ಸಂಸ್ಥೆಗಳ ತೆರೆಯುವಿಕೆ, ಜಿಲ್ಲೆಯಿಂದ ಹೊರ ಹೋಗುವುದಕ್ಕೆ ಅನುಮತಿ ಇರುವುದಿಲ್ಲ.

ಯಾವುದಕ್ಕೆಲ್ಲ ಅನುಮತಿ?

* ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಸ ಸಂಖ್ಯೆಯ ವಾಹನಗಳಿಗೂ ಮಂಗಳವಾರ, ಗುರುವಾರ, ಶನಿವಾರ ಸಮ ಸಂಖ್ಯೆಯ ವಾಹನಗಳ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ.

* 50–60 ಕಿ.ಮೀ ವ್ಯಾಪ್ತಿಯೊಳಗೆ ಕಾರ್ಯಾಚರಿಸುವ ಬಸ್ಸುಗಳ ಓಡಾಕ್ಕೆ ಅನುಮತಿ ನೀಡಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಸುವುದು ಕಡ್ಡಾಯ. ನಿಂತುಕೊಂಡು ಪ್ರಯಾಣಿಸುವಂತಿಲ್ಲ. ಮೂರು ಆಸನಗಳ ಬಸ್ಸಿನಲ್ಲಿ ಮಧ್ಯದ ಆಸನ ಬಿಟ್ಟು ಕುಳಿತುಕೊಳ್ಳಬೇಕು.

* ಶನಿವಾರ ಮತ್ತು ಭಾನುವಾರಗಳಂದು ಕ್ಷೌರದಂಗಡಿಗಳು ಕಾರ್ಯಾಚರಿಸಬಹುದು

* ಹೋಟೆಲ್, ರೆಸ್ಟೋರೆಂಟ್‌ಗಳು ಸಂಜೆ 7ರವರೆಗೆ ಕಾರ್ಯಾಚರಿಸಬಹುದು. ಪಾರ್ಸೆಲ್ ಕೌಂಟರ್‌ಗಳಿಗೆ ರಾತ್ರಿ 8ರವರೆಗೂ ಕಾರ್ಯಾಚರಣೆಗೆ ಅನುಮತಿ.

* ಶನಿವಾರ, ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಸಹಕಾರ ಸಂಘಗಳಲ್ಲಿ ಶೇ 33ರಷ್ಟು ಮತ್ತು ಪಂಚಾಯತ್, ವಿಲೇಜ್‌ ಆಫೀಸ್‌ಗಳಲ್ಲಿ ಶೇ 35ರಷ್ಟು ಉದ್ಯೋಗಿಗಳು ಮಾತ್ರ ಕಾರ್ಯನಿರ್ವಹಿಸಬಹುದು.

* ವಲಸೆ ಮತ್ತು ಕಟ್ಟಡ ಕಾರ್ಮಿಕರು ಕೆಲಸ ಮಾಡಬಹುದು

* ವೈದ್ಯರು, ಶುಶ್ರೂಷಕಿಯರು, ವಿಜ್ಞಾನಿಗಳು ರಾಜ್ಯದ ಒಳಗೆ ಮತ್ತು ಹೊರ ರಾಜ್ಯಗಳಿಗೆ ಪ್ರಯಾಣಿಸಬಹುದು. ಆಂಬುಲೆನ್ಸ್‌ಗಳಿಗೂ ಈ ವಿನಾಯಿತಿ ಇದೆ.

* ಖಾದ್ಯ ತೈಲ, ಆಹಾರ ತಯಾರಿಕಾ ಘಟಕಗಳು, ಅಕ್ಕಿ ಮಿಲ್‌ಗಳು ಕಾರ್ಯಾಚರಿಸಬಹುದು. ಮೀನುಗಾರಿಕೆ, ಮೀನು ಸಾಗಾಟಕ್ಕೆ ಅನುಮತಿ ಇದೆ. ಅಂಚೆ, ಕೊರಿಯರ್ ಸೇವೆಗೂ ವಿನಾಯಿತಿ ಇದೆ.

ಕೃಷಿ ಚಟುವಟಿಕೆ ಮತ್ತು ಕೃಷಿ ಕಾರ್ಮಿಕರಿಗೂ ಕೇರಳ ಸರ್ಕಾರ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದೆ ಎಂದು ಮಲಯಾಳ ಮನೋರಮಾ ವರದಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.