ADVERTISEMENT

ತಮಿಳುನಾಡು, ಕರ್ನಾಟಕದಲ್ಲಿ ಕೋವಿಡ್ ಹೆಚ್ಚಳ: ಗಡಿ ಮುಚ್ಚಲು ಕೇರಳ ನಿರ್ಧಾರ

ಏಜೆನ್ಸೀಸ್
Published 27 ಏಪ್ರಿಲ್ 2020, 12:44 IST
Last Updated 27 ಏಪ್ರಿಲ್ 2020, 12:44 IST
ಕೇರಳದ ಮುತ್ತಂಙ ಚೆಕ್ ಪೋಸ್ಟ್
ಕೇರಳದ ಮುತ್ತಂಙ ಚೆಕ್ ಪೋಸ್ಟ್   

ತಿರುವನಂತಪುರಂ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಜನರು ಕೇರಳಕ್ಕೆ ಬರದಂತೆ ಅಂತರರಾಜ್ಯ ಗಡಿ ಬಂದ್ ಮಾಡಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯ ಪೊಲೀಸರಿಗೆ ಆದೇಶಿಸಿದ್ದಾರೆ.

ಭಾನುವಾರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿದ ಪಿಣರಾಯಿ ವಿಜಯನ್ ಪಕ್ಕದ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವುದರಿಂದ ಅಂತರ ರಾಜ್ಯ ಗಡಿ ಬಂದ್ ಮಾಡಲು ಸೂಚಿಸಿದ್ದಾರೆ.ಗಡಿ ಜಿಲ್ಲೆಯಾದ ಇಡುಕ್ಕಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ತಮಿಳುನಾಡಿನ ಕೊಯಂಬತ್ತೂರ್ ಮತ್ತು ತಿರುಪುರ್ ಜಿಲ್ಲೆಗಳು ಕೇರಳದೊಂದಿಗೆ ಗಡಿ ಹಂಚಿಕೊಂಡಿವೆ. ಹಾಗಾಗಿ ಕೇರಳದ ಗಡಿಭಾಗಗಳನ್ನು ಬಂದ್ ಮಾಡಬೇಕು ಎಂದು ಅವರು ಹೇಳಿದ್ದಾರೆ.

ADVERTISEMENT

ಸರಕು ಸಾಗಣೆಯ ವಾಹನಗಳನ್ನು ಗಡಿಭಾಗದಲ್ಲಿಯೇ ಸ್ಯಾನಿಟೈಜ್ ಮಾಡಿ, ಚಾಲಕ ಮತ್ತು ಇತರ ಸಿಬ್ಬಂದಿಗೆ ಕೋವಿಡ್-19 ರೋಗ ಲಕ್ಷಣಗಳಿವೆಯೇ ಎಂದು ತಪಾಸಣೆ ಮಾಡಬೇಕು. ಗಡಿಭಾಗದಲ್ಲಿ ದೇಹದ ಉಷ್ಣತೆ ತಪಾಸಣೆ ಮಾಡುವುದು ಕಡ್ಡಾಯ ಎಂದಿದ್ದಾರೆ ಪಿಣರಾಯಿ,

ಲಾಕ್‍ಡೌನ್ ನಿರ್ಬಂಧ ವಿಧಿಸಿದಾಗ ಗಡಿಭಾಗದಿಂದ ಜನರ ಆಚೀಚೆ ಸಾಗಲು ಹಣ ತೆರುವ ಮಾಫಿಯಾ ಕೂಡಾ ತಲೆದೋರಿತ್ತು ಎಂದು ಪೊಲೀಸರು ಹೇಳಿದ್ದರು.ಆ್ಯಂಬುಲೆನ್ಸ್ , ಸರಕು ಸಾಗಣೆ ಮತ್ತು ಕಂಟೇನರ್ ಲಾರಿಗಳು ಈ ರೀತಿ ಹಣ ಪಡೆದು ಜನರನ್ನು ಗಡಿ ದಾಟಿಸಿಬಿಡುತ್ತಿದ್ದವು ಎಂದು ಪೊಲೀಸರು ಸರ್ಕಾರಕ್ಕೆ ಮಾಹಿತಿ ನೀಡಿದ್ದರು. ಅದೇ ರೀತಿ ಕಳ್ಳಭಟ್ಟಿ ಸಾಗಣಿಕೆಯ ನಡೆದು ಬರುತ್ತಿತ್ತು ಎಂದು ಪೊಲೀಸರು ಹೇಳಿದ್ದರು.

ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹರಾ ಕೂಡಾ ಈ ಸಭೆಯಲ್ಲಿ ಭಾಗಿಯಾಗಿದ್ದು , ಜನರು ಅಕ್ರಮವಾಗಿ ಗಡಿ ದಾಟುವುದನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಗಡಿಭಾಗದಲ್ಲಿ ಜನರ ಚಲನೆ ಮೇಲೆ ನಿಗಾ ಇರಿಸಲು ಡ್ರೋನ್ ಬಳಸಲಾಗುವುದು ಎಂದು ಅವರು ಹೇಳಿದ್ದಾರೆ.

ಅಂತರರಾಜ್ಯ ರೈಲ್ವೆ, ಗಡಿಪ್ರದೇಶದಲ್ಲಿನ ದಾರಿ, ಕಾಡಿನ ಮಧ್ಯೆ ಇರುವ ದಾರಿ, ತೋಟ ಮತ್ತು ಸಮುದ್ರ ದಾರಿಯನ್ನೂ ಬಂದ್ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಜನರು ಮನೆಯೊಳಗೇ ಇರುವಂತೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಪಿಣರಾಯಿ ವಿಜಯನ್ ಪೊಲೀಸರಿಗೆ ಹೇಳಿದ್ದಾರೆ. ಅವರಿಗೆ ಆಹಾರ, ಔಷಧಿ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಬೇಕು. ಹೆಚ್ಚು ಪ್ರಕರಣಗಳಿರುವ ಪ್ರದೇಶದಲ್ಲಿ ಒಂದೇ ಪ್ರವೇಶ ಮತ್ತು ಹೊರಗೆ ಹೋಗುವ ವ್ಯವಸ್ಥೆ ಇರಬೇಕು. ಕೆಲವೊಂದು ಮಸೀದಿಗಳಲ್ಲಿ ಜನರ ರಂಜಾನ್ಪ್ರಾರ್ಥನೆಗಾಗಿ ಸೇರುತ್ತಾರೆ ಎಂದು ವರದಿ ಲಭಿಸಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಈ ರೀತಿ ಸೇರುವುದಕ್ಕೆ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಪಿಣರಾಯಿ ಹೇಳಿದ್ದಾರೆ .

ಕೆಲವು ದಿನಗಳ ಹಿಂದೆ ಕಾಸರಗೋಡಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾದಾಗ ಕರ್ನಾಟಕ ಗಡಿ ಮುಚ್ಚಿತ್ತು. ಕಾಸರಗೋಡು ಗಡಿಭಾಗದವರು ಮಂಗಳೂರಿಗೆ ಪ್ರವೇಶಿಸದಂತೆ ರಸ್ತೆಯಲ್ಲಿ ಮಣ್ಣು ಸುರಿದು ರಸ್ತೆ ಬಂದ್ ಮಾಡಿದ್ದರಿಂದ ಮತ್ತು ಅಗತ್ಯ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗುವ ರೋಗಿಗಗಳನ್ನು ಗಡಿಯಲ್ಲಿ ತಡೆದುದ್ದರಿಂದ ಇಲ್ಲಿಯವರೆಗೆ 10 ರೋಗಿಗಳು ಸಾವಿಗೀಡಾಗಿದ್ದಾರೆ. ಕಾಸರಗೋಡಿನವರಿಗೆ ಕರ್ನಾಟಕ ಗಡಿಯೊಳಗೆ ಪ್ರವೇಶ ನೀಡುವುದಿಲ್ಲ ಎಂದು ಕರ್ನಾಟಕ ಪಟ್ಟು ಹಿಡಿದು 15 ದಿನಗಳ ನಂತರ ಗಡಿಭಾಗ ಸಂಚಾರಕ್ಕೆ ತೆರೆದುಕೊಟ್ಟಿತ್ತು.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.