ADVERTISEMENT

ಕೇರಳದ 'ಎರಡು ರೂಪಾಯಿ ಡಾಕ್ಟ್ರು' ನಿಧನ; ಸಿಎಂ ಪಿಣರಾಯಿ ವಿಜಯನ್ ಸಂತಾಪ

ಪಿಟಿಐ
Published 3 ಆಗಸ್ಟ್ 2025, 7:11 IST
Last Updated 3 ಆಗಸ್ಟ್ 2025, 7:11 IST
<div class="paragraphs"><p>ವೈದ್ಯರು</p></div>

ವೈದ್ಯರು

   

(ಪ್ರಾತಿನಿಧಿಕ ಚಿತ್ರ)

ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕಳೆದ ಐದು ದಶಕಗಳಿಂದ ಕೇವಲ ಎರಡು ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಎ.ಕೆ. ರೈರು ಗೋಪಾಲ್, ವಯೋಸಹಜ ಕಾಯಿಲೆಗಳಿಂದ ಇಂದು (ಭಾನುವಾರ) ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ADVERTISEMENT

ಗೋಪಾಲ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಪಯ್ಯಂಬಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಡಾ. ರೈರು ಗೋಪಾಲ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. 'ಜನರ ಡಾಕ್ಟರ್ ಆಗಿರುವ ರೈರು ತಾವು ನೀಡುವ ಚಿಕಿತ್ಸಗೆಗಾಗಿ ರೋಗಿಗಳಿಂದ ಎರಡು ರೂಪಾಯಿ ಶುಲ್ಕ ಪಡೆಯುತ್ತಿದ್ದರು. ಜನರಿಗೆ ಸೇವೆ ಸಲ್ಲಿಸುವ ಅವರ ಇಚ್ಛಾಶಕ್ತಿಯು ರೋಗಿಗಳಿಗೆ ನೆರವಾಗಿತ್ತು' ಎಂದು ಉಲ್ಲೇಖಿಸಿದ್ದಾರೆ.

ಎರಡು ರೂಪಾಯಿ ಡಾಕ್ಟ್ರು ಎಂದೇ ಜನಪ್ರಿಯ...

ಪ್ರತಿದಿನ ಬೆಳಿಗ್ಗೆ 4ರಿಂದ ಸಂಜೆ 4ರವರೆಗೆ ತಮ್ಮ 'ಲಕ್ಷ್ಮಿ' ನಿವಾಸದಲ್ಲೇ ಡಾ.ರೈರು ರೋಗಿಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ದೈನಂದಿನ ಜಿಲ್ಲೆಯ ವಿವಿಧ ಭಾಗಗಳಿಂದ ಸೇರಿದಂತೆ ಹತ್ತಿರದ ಜಿಲ್ಲೆಗಳಿಂದಲೂ ನೂರಾರು ಮಂದಿ ಚಿಕಿತ್ಸೆಗಾಗಿ ಭೇಟಿ ಕೊಡುತ್ತಿದ್ದರು.

ಔಷಧಿಗಳನ್ನು ಖರೀದಿಸಲು ದುಡ್ಡಿಲ್ಲದ ರೋಗಿಗಳಿಗೆ ಉಚಿತವಾಗಿಯೇ ಔಷಧಿಗಳನ್ನು ಒದಗಿಸುತ್ತಿದ್ದರು. ಅವರು ಬಡವರ ಪಾಲಿನ 'ಎರಡು ರೂಪಾಯಿ ಡಾಕ್ಟ್ರು' ಎಂದೇ ಜನಪ್ರಿಯರಾಗಿದ್ದರು.

ವಯೋಸಹಜ ಆರೋಗ್ಯ ಕಾಯಿಲೆಯಿಂದಾಗಿ 2024ರ ಮೇ ತಿಂಗಳಲ್ಲಿ ಚಿಕಿತ್ಸಾಲಯವನ್ನು ಸ್ಥಗಿತಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.