ಪಟ್ನಾ: ಕೈಗಾರಿಕೋದ್ಯಮಿ ಗೋಪಾಲ್ ಖೇಮ್ಕಾ ಅವರ ಹತ್ಯೆ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು (ಮಂಗಳವಾರ) ಮುಂಜಾನೆ ಪಟ್ನಾದ ದಮಾರಿಯಾ ಘಾಟ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ.ವಿಕಾಸ್ ಅಲಿಯಾಸ್ ರಾಜ (29) ಹತ್ಯೆಗೀಡಾದ ಆರೋಪಿ. ಈತ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿಯೂ ಬೇಕಾಗಿದ್ದ ಎಂದು ಅವರು ಹೇಳಿದ್ದಾರೆ.
ಸುಳಿವು ದೊರೆತ ಹಿನ್ನೆಲೆಯಲ್ಲಿ, ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳ ತಂಡವು ವಿಕಾಸ್‌ನನ್ನು ಹುಡುಕಲು ಬೆಳಗಿನ ಜಾವ 2.25 ರ ಸುಮಾರಿಗೆ ದಮಾರಿಯಾ ಘಾಟ್‌ಗೆ ತಲುಪಿತ್ತು. ಪೊಲೀಸ್ ಸಿಬ್ಬಂದಿಯನ್ನು ಕಂಡ ಕೂಡಲೇ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಬಳಿಕ ಗುಂಡು ಹಾರಿಸಿದ. ಅಧಿಕಾರಿಗಳು ನಡೆಸಿದ ಪ್ರತಿದಾಳಿಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವುದೇ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿಲ್ಲ. ಘಟನಾ ಸ್ಥಳದಿಂದ ಒಂದು ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಖೇಮ್ಕಾ ಹತ್ಯೆಗೆ ಬಳಸಿದ ಆಯುಧವನ್ನು ವಿಕಾಸ್ ಒದಗಿಸಿದ್ದಾನೆ ಎಂದು ಶಂಕಿಸಲಾಗಿದೆ. ಪ್ರಕರಣದ ಸಂಬಂಧ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ.
ಶುಕ್ರವಾರ ಗಾಂಧಿ ಮೈದಾನ ಪ್ರದೇಶದಲ್ಲಿರುವ ನಿವಾಸದ ಹೊರಗೆ ಖೇಮ್ಕಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.