ADVERTISEMENT

ಮುಂಬೈ| ಖಬೂತರ್‌ಖಾನಾ ಬಂದ್‌: ಜೈನ ಗುರು ಉಪವಾಸ ಸತ್ಯಾಗ್ರಹ

ಪಿಟಿಐ
Published 3 ನವೆಂಬರ್ 2025, 15:38 IST
Last Updated 3 ನವೆಂಬರ್ 2025, 15:38 IST
ಪಾರಿವಾಳ 
ಪಾರಿವಾಳ    

ಮುಂಬೈ: ಜೈನ ಸಮುದಾಯದವರು ಸಾಂಪ್ರದಾಯಕವಾಗಿ ಪಾರಿವಾಳಗಳಿಗೆ ಆಹಾರ ನೀಡುತ್ತಿದ್ದ ದಾದರ್‌ ಖಬೂತರ್‌ಖಾನಾ ಮೈದಾನವನ್ನು ಮುಚ್ಚಿ ಮುಂಬೈ ಪಾಲಿಕೆಯು ಆದೇಶ ಹೊರಡಿಸಿದೆ. 

ಪಾಲಿಕೆಯ ನಿರ್ಧಾರವನ್ನು ವಿರೋಧಿಸಿ ಜೈನ ಗುರು ನಿಲೇಶ್ಚಂದ್ರ ವಿಜಯ್‌ ಅವರು ಬೃಹತ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಕೇಂದ್ರ ಕಚೇರಿ ಬಳಿಯ ಅಜಾದ್‌ ಮೈದಾನದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಉಪವಾಸವನ್ನು ಆರಂಭಿಸಿದರು. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಾಲಿಕೆಯು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೂ ಉಪವಾಸ ಪ್ರತಿಭಟನೆ ಮುಂದುವರಿಸುತ್ತೇನೆ’ ಎಂದು ಹೇಳಿದರು. 

ADVERTISEMENT

‘ದಾದರ್‌ ಖಬೂತರ್‌ಖಾನಾ ಬದಲಾಗಿ ಉಳಿದ ನಾಲ್ಕು ಕಡೆ ಇರುವ ಖಬೂತರ್‌ಖಾನಾಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡಬಹುದಾಗಿದ್ದು, ಇದಕ್ಕೆ ಮುಂಜಾನೆ 7ರಿಂದ 9 ಗಂಟೆವರೆಗೆ ಮಾತ್ರ ಅವಕಾಶ ಇರುತ್ತದೆ. ಖಬೂತರ್‌ಖಾನಾಗಳನ್ನು ನಿರ್ವಹಿಸುವ ಜವಾಬ್ದಾರಿಯು ಸರ್ಕಾರೇತರ ಸಂಸ್ಥೆಗಳದ್ದಾಗಿರುತ್ತದೆ. ಈಗ ಮುಚ್ಚಲಾಗಿರುವ ಖಬೂತರ್‌ಖಾನಾವನ್ನು ಮತ್ತೆ ತೆರೆಯಲಾಗುವುದಿಲ್ಲ’ ಎಂದು ಬಿಎಂಸಿ ಇತ್ತೀಚೆಗೆ ಪ್ರಕಟಿಸಿದೆ. 

‘ಅಜಾದ್‌ ಮೈದಾನ ತಲುಪಿದಾಗಿನಿಂದ ನೀರು ಕುಡಿಯುವುದನ್ನು ನಾನು ನಿಲ್ಲಿಸಿದ್ದೇನೆ. ದಾದರ್‌ ಖಬೂತರ್‌ಖಾನಾಗೆ ಪರ್ಯಾಯವಾಗಿ ನೀಡಿರುವ ಸ್ಥಳಗಳು 4, 5 ಹಾಗೂ 9 ಕಿ.ಮೀ ದೂರದಲ್ಲಿವೆ. ಅಷ್ಟು ದೂರ ಪಾರಿವಾಳಗಳು ಹಾರುತ್ತವೆಯೇ? ದಾದರ್‌ ಖಬೂತರ್‌ಖಾನಾದಿಂದ 2 ಕಿ.ಮೀ ವ್ಯಾಪ್ತಿಯೊಳಗೆ ಪರ್ಯಾಯ ಸ್ಥಳ ನೀಡಬೇಕಿತ್ತು. ಇಲ್ಲವೇ ಅದನ್ನೇ ಮತ್ತೆ ತೆರೆಯಬೇಕು’ ಎಂದು ನಿಲೇಶ್ಚಂದ್ರ ವಿಜಯ್‌ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.