ADVERTISEMENT

ರೈತ ಹೋರಾಟಕ್ಕೆ ಖಾಲಿಸ್ತಾನ ನಂಟು?

ದೆಹಲಿ ಪೊಲೀಸರ ಶಂಕೆ l ಗ್ರೇಟಾ ಥನ್‌ಬರ್ಗ್‌ ಟ್ವೀಟ್‌ನ ‘ಟೂಲ್‌ಕಿಟ್’ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 17:47 IST
Last Updated 4 ಫೆಬ್ರುವರಿ 2021, 17:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ‘ರೈತರ ಪ್ರತಿಭಟನೆಯ ಭಾಗವಾಗಿ ದೆಹಲಿಯಲ್ಲಿ ಜನವರಿ 26ರಂದು ನಡೆದ ಹೋರಾಟದ ಹಿಂದೆ ಖಾಲಿಸ್ತಾನ ಪರ ಹೋರಾಟಗಾರರ ಕೈವಾಡ ಇರುವ ಸಾಧ್ಯತೆ ಇದೆ’ ಎಂದು ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪರಿಸರಪರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಅವರು ಟ್ವೀಟ್‌ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡುವುದು ಹೇಗೆ ಎಂಬುದನ್ನು ವಿವರಿಸುವ ‘ಟೂಲ್‌ಕಿಟ್‌’ ಅನ್ನು ಹಂಚಿಕೊಂಡಿದ್ದರು. ಈ ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಗಳ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಗ್ರೇಟಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಸುದ್ದಿ ಗುರುವಾರ ಮಧ್ಯಾಹ್ನದ ನಂತರ ವೈರಲ್ ಆಗಿತ್ತು. ಆದರೆ ಗ್ರೇಟಾ ಸೇರಿದಂತೆ ಯಾರ ವಿರುದ್ಧವೂ ಎಫ್‌ಐಆರ್ ದಾಖಲಿಸಿಲ್ಲ. ಎಫ್‌ಐಆರ್‌ನಲ್ಲಿ ಯಾರನ್ನೂ ಹೆಸರಿಸಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

‘ಗ್ರೇಟಾ ಅವರು ಹಂಚಿಕೊಂಡಿದ್ದ ಟೂಲ್‌ಕಿಟ್‌ನಲ್ಲಿ, ದೇಶದಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುವ ಕಾರ್ಯಯೋಜನೆಯು ಒಳಗೊಂಡಿದೆ. ಜನವರಿ 26 ಮತ್ತು 23ರಂದು ಡಿಜಿಟಲ್ ಸ್ಟ್ರೈಕ್‌ ನಡೆಸುವ ಕಾರ್ಯಯೋಜನೆಯನ್ನು ಈ ಟೂಲ್‌ಕಿಟ್ ವಿವರಿಸಿದೆ. ಹೀಗಾಗಿ ಇದನ್ನು ಬರೆದ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಸಂಚು ರೂಪಿಸಿದ ಮತ್ತು ದೇಶದ್ರೋಹ ಎಸಗಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಖಾಲಿಸ್ತಾನ ಪರ ಸಂಘಟನೆಯು ಈ ಟೂಲ್‌ಕಿಟ್‌ ಅನ್ನು ಸಿದ್ಧಪಡಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ದೆಹಲಿ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ಮಾಹಿತಿ ನೀಡಿದ್ದಾರೆ.

ADVERTISEMENT

ಟೂಲ್‌ಕಿಟ್‌ ಬರೆದವರ ವಿರುದ್ಧ ಎಫ್‌ಐಆರ್ ದಾಖಲಾದ ನಂತರ, ‘ಈಗಲೂ ನಾನು ಪ್ರತಿಭಟನೆ ನಿರತ ರೈತರ ಪರವಾಗಿ ನಿಲ್ಲುತ್ತೇನೆ’ ಎಂದು ಗ್ರೇಟಾ ಟ್ವೀಟ್ ಮಾಡಿದ್ದಾರೆ.

ದಿನದ ಬೆಳವಣಿಗೆ

lರೈತರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅವರನ್ನು ಭೇಟಿ ಮಾಡುವ ಇಚ್ಛೆ ಪ್ರಧಾನಿಗೆ ಇಲ್ಲ. ಪ್ರಧಾನಿ ನಿವಾಸದಿಂದ ಪ್ರತಿಭಟನೆಯ ಸ್ಥಳಕ್ಕೆ ಅಷ್ಟೊಂದು ದೂರ ಇದೆಯೇ? ಅಥವಾ ಅಲ್ಲಿಗೆ ಹೋಗಲು ಪ್ರಧಾನಿಗೆ ಅಹಂ ಅಡ್ಡಿಬರುತ್ತಿದೆಯೇ: ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನೆ

lಫೆಬ್ರುವರಿ 6ರಂದು ರೈತ ಸಂಘಟನೆಗಳು ದೇಶದಾದ್ಯಂತ ನಡೆಸಲಿರುವ ರಸ್ತೆ ತಡೆ (ಛಕ್ಕಾ ಜಾಮ್) ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆ ಚರ್ಚೆ ನಡೆಸಿದ ದೆಹಲಿ ಪೊಲೀಸ್ ಆಯುಕ್ತ ಎಸ್‌.ಎನ್‌.ಶ್ರೀವಾಸ್ತವ

lಹರಿಯಾಣದ ಸೋನಿಪತ್ ಮತ್ತು ಜಜ್ಜಾರ್ ಜಿಲ್ಲೆಗಳಲ್ಲಿ ಫೆಬ್ರುವರಿ 5ರ ಸಂಜೆ 5ರವರೆಗೆ ಇಂಟರ್ನೆಟ್ ಸೇವೆ ಸ್ಥಗಿತ

lಸಂಸತ್ತಿನ ಉಭಯ ಸದನಗಳಲ್ಲಿ, ನೂತನ ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿದ ವಿರೋಧ ಪಕ್ಷಗಳು. ನಡೆಯದ ಕಲಾಪ. ಲೋಕಸಭೆಯಲ್ಲಿ ಕಲಾಪ ನಾಲ್ಕು ಬಾರಿ ಮುಂದೂಡಿಕೆ

lಕೃಷಿ ಕಾಯ್ದೆಗಳ ವಿರುದ್ಧ ಹೊರಡಿಸಲಾದ ಆನ್‌ಲೈನ್ ಅರ್ಜಿಗೆ 1.10 ಲಕ್ಷಕ್ಕೂ ಹೆಚ್ಚು ಮಂದಿಯ ಸಹಿ. ಬ್ರಿಟನ್ ಸಂಸತ್ತಿನಲ್ಲಿ ಭಾರತದ ರೈತರ ಹೋರಾಟವನ್ನು ಚರ್ಚೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ

ಟೂಲ್‌ಕಿಟ್‌ನಲ್ಲಿ ಏನಿದೆ?

ಭಾರತದ ರೈತರ ಜತೆ ಚರ್ಚೆ ನಡೆಸದೇ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಇವು ರೈತರನ್ನು ಕಾರ್ಪೊರೇಟ್‌ ಕಂಪನಿಗಳ ನಿಯಂತ್ರಣಕ್ಕೆ ಸಿಲುಕಿಸುತ್ತವೆ. ಇವುಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಬೆಂಬಲ ಸೂಚಿಸಿ. ಅವರ ಹೋರಾಟದಲ್ಲಿ ಭಾಗಿಯಾಗಿ ಎಂದು ಟೂಲ್‌ಕಿಟ್‌ನಲ್ಲಿ ಹೇಳಲಾಗಿದೆ. ಕ್ರಿಪ್ಟೋಪ್ಯಾಡ್‌ನಲ್ಲಿ ಈ ಟೂಲ್‌ಕಿಟ್ ಇದೆ. ಇದನ್ನು ಯಾರು ಸಿದ್ಧಪಡಿಸಿದ್ದಾರೆ, ಅಪ್‌ಲೋಡ್ ಮಾಡಿದ್ದಾರೆ ಎಂಬುದರ ಮಾಹಿತಿ ಇನ್ನೂ ಸಿಕ್ಕಿಲ್ಲ.

ರೈತರ ಹೋರಾಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಪ್ರತಿಭಟನೆ ನಡೆಸಿ ಎಂದು ಈ ಟೂಲ್‌ಕಿಟ್‌ನಲ್ಲಿ ಕರೆ ನೀಡಲಾಗಿದೆ. ಫೆಬ್ರುವರಿ 13/14ರಂದು ಡಿಜಿಟಲ್ ಸ್ಟ್ರೈಕ್‌ ನಡೆಸಿ. ಸಾಮಾಜಿಕ ಜಾಲತಾಣಗಳಲ್ಲಿ #FarmersProtest #StandWithFarmers ಹ್ಯಾಶ್‌ಟ್ಯಾಗ್ ಬಳಸಿ, ಪೋಸ್ಟ್‌ ಮಾಡಿ. ಭಾರತದ ರಾಯಭಾರ ಕಚೇರಿಗಳ ಎದುರು ಪ್ರತಿಭಟನೆ ನಡೆಸಿ. ಫೆಬ್ರುವರಿ 13/14ಕ್ಕೂ ಮೊದಲೂ ಪ್ರತಿಭಟನೆ ನಡೆಸಿ. #AskIndiaWhy ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿ. ಟ್ವೀಟ್‌ನಲ್ಲಿ ಭಾರತದ ಪ್ರಧಾನಿ ಮತ್ತು ಕೃಷಿ ಸಚಿವರನ್ನು ಟ್ಯಾಗ್ ಮಾಡಿ ಎಂದು ಈ ಟೂಲ್‌ಕಿಟ್‌ನಲ್ಲಿ ಕರೆ ನೀಡಲಾಗಿದೆ.

ಜನವರಿ 23 ಮತ್ತು 26ರ ಪ್ರತಿಭಟನೆಯ ವಿಚಾರ ಟೂಲ್‌ಕಿಟ್‌ನಲ್ಲಿ ಇದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಆ ಮಾಹಿತಿ ಟೂಲ್‌ಕಿಟ್‌ನಲ್ಲಿ ಇಲ್ಲ.

ಅಮೆರಿಕಕ್ಕೆ ತಿರುಗೇಟು

‘ಶಾಂತಿಯುತ ಪ್ರತಿಭಟನೆಗಳು ಪ್ರಗತಿಶೀಲ ಪ್ರಜಾಪ್ರಭುತ್ವದ ಹೆಗ್ಗುರುತು ಎಂದು ನಾವು ಪರಿಗಣಿಸುತ್ತೇವೆ. ಭಾರತದ ಸುಪ್ರೀಂ ಕೋರ್ಟ್ ಸಹ ಇದನ್ನೇ ಹೇಳಿದೆ. ಎರಡೂ ಕಡೆಯವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇದ್ದರೂ, ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಭಾರತದಲ್ಲಿನ ಅಮೆರಿಕದ ರಾಯಭಾರ ಕಚೇರಿಯು ಹೇಳಿದೆ.

ಅಮೆರಿಕದ ಈ ಹೇಳಿಕೆಯನ್ನು ಭಾರತವು ನಯವಾಗಿ ಟೀಕಿಸಿದೆ. ‘ಅಮೆರಿಕದ ಹೇಳಿಕೆಯನ್ನು ಗಮನಿಸಿದ್ದೇವೆ. ಯಾವ ಅರ್ಥದಲ್ಲಿ ಅದನ್ನು ಹೇಳಿದ್ದಾರೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಜನವರಿ 26ರಂದು ಕೆಂಪುಕೋಟೆಯ ಮೇಲೆ ನಡೆದ ದಾಳಿಯು, ಜನವರಿ 6ರಂದು ಕ್ಯಾಪಿಟಲ್‌ ಹಿಲ್‌ನಲ್ಲಿ ನಡೆದ ದಾಳಿಗೆ ಸಮನಾಗಿತ್ತು. ಎರಡೂ ಕಡೆ ಒಂದೇ ರೀತಿಯ ಭಾವನೆಗಳು ವ್ಯಕ್ತವಾಗಿದ್ದವು. ನಮ್ಮಲ್ಲಿನ ಕಾನೂನು ಆಧರಿಸಿ ನಾವು ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಭಾರತದ ವಿದೇಶಾಂಗ ಸಚಿವಾಲಯವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.