ಮಹೂ (ಮಧ್ಯಪ್ರದೇಶ): ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಬಡತನ ದೂರವಾಗಲಿದೆಯೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಈ ಹೇಳಿಕೆ ‘ಸನಾತನ ವಿರೋಧಿ’ ಎಂದು ಬಿಜೆಪಿ ಟೀಕಿಸಿದ್ದು, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಕ್ಷಮೆಯಾಚಿಸುವಂತೆ ಆಗ್ರಹಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ದಿನದಂದೇ ಖರ್ಗೆ ಅವರು ಈ ಹೇಳಿಕೆ ನೀಡಿದ್ದಾರೆ.
ಪಕ್ಷದ ವತಿಯಿಂದ ಸೋಮವಾರ ಇಲ್ಲಿ ಆಯೋಜಿಸಿದ್ದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಾನು ಇಲ್ಲಿ ಯಾರ ನಂಬಿಕೆಯನ್ನೂ ಪ್ರಶ್ನಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ನರೇಂದ್ರ ಮೋದಿ ಅವರ ಸುಳ್ಳು ಭರವಸೆಗಳ ಬಲೆಯಲ್ಲಿ ಸಿಲುಕಬೇಡಿ. ಗಂಗಾ ಸ್ನಾನದಿಂದ ಬಡತನವು ಕೊನೆಗೊಳ್ಳುತ್ತದೆಯೇ? ಅದರಿಂದ ನಿಮ್ಮ ಹೊಟ್ಟೆ ತುಂಬುವುದೇ? ನಾನು ಇಲ್ಲಿ ಯಾವುದೇ ವ್ಯಕ್ತಿಯ ನಂಬಿಕೆಯನ್ನು ಪ್ರಶ್ನಿಸಲು ಬಯಸುವುದಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದರು.
‘ಆದರೆ, ಒಂದು ಮಗು ಹಸಿವಿನಿಂದ ಸಾಯುತ್ತಿರುವಾಗ, ಶಿಕ್ಷಣದಿಂದ ವಂಚಿತವಾಗಿರುವಾಗ, ಕೂಲಿ ಕಾರ್ಮಿಕರಿಗೆ ಅವರ ಬಾಕಿ ಸಿಗದೇ ಇರುವಂತಹ ಸಮಯದಲ್ಲಿ, ಈ ಜನರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಗಂಗಾ ನದಿಯಲ್ಲಿ ಸ್ನಾನ ಮಾಡಲು ಸ್ಪರ್ಧೆಗೆ ಬಿದ್ದಿದ್ದಾರೆ’ ಎಂದು ಟೀಕಿಸಿದರು.
‘ಅಂತಹ ಜನರಿಂದ ದೇಶಕ್ಕೆ ಪ್ರಯೋಜನ ಉಂಟಾಗದು. ನಾವು ದೇವರನ್ನು ನಂಬುತ್ತೇವೆ. ಜನರು ಮನೆಯಲ್ಲಿ ಪ್ರತಿದಿನವೂ ಪೂಜೆ ಮಾಡುವರು. ಎಲ್ಲಾ ಮಹಿಳೆಯರು ಪೂಜೆ ಮಾಡಿದ ನಂತರವೇ ಮನೆಯಿಂದ ಹೊರಗೆ ಹೋಗುತ್ತಾರೆ. ಅದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ಧರ್ಮದ ಹೆಸರಿನಲ್ಲಿ ಬಡವರನ್ನು ಶೋಷಣೆ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ’ ಎಂದರು.
ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಖರ್ಗೆ, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಶಾ ಅವರು ನೂರು ಜನ್ಮಗಳಲ್ಲೂ ಸ್ವರ್ಗಕ್ಕೆ ಹೋಗಲು ಸಾಧ್ಯವಾಗದಷ್ಟು ಪಾಪಗಳನ್ನು ಮಾಡಿದ್ದಾರೆ’ ಎಂದು ಹೇಳಿದರು.
ಬಿಜೆಪಿ ನಾಯಕರು ಕ್ಯಾಮೆರಾಗಳಿಗೆ ಪೋಸ್ ನೀಡುವ ಉದ್ದೇಶದಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಲು ಪೈಪೋಟಿ ನಡೆಸುತ್ತಿದ್ದಾರೆಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಖರ್ಗೆ ಅವರ ಹೇಳಿಕೆಯಿಂದ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಸನಾತನ ಧರ್ಮದ ವಿರುದ್ಧದ ಇಂತಹ ಹೇಳಿಕೆ ನಾಚಿಕೆಗೇಡಿನದ್ದುಸಂಬಿತ್ ಪಾತ್ರ ಬಿಜೆಪಿ ರಾಷ್ಟ್ರೀಯ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.