ADVERTISEMENT

ತವಾಂಗ್ ತಂಟೆ ಬಗ್ಗೆ ಸಂಸತ್‌ನಲ್ಲಿ ಚರ್ಚೆಗೆ ಆಗ್ರಹಿಸಿ ಖರ್ಗೆ ಧರಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2022, 4:10 IST
Last Updated 21 ಡಿಸೆಂಬರ್ 2022, 4:10 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ    

ನವದೆಹಲಿ: ಡಿಸೆಂಬರ್ 9 ರಂದು ತವಾಂಗ್ ಸೆಕ್ಟರ್ ಬಳಿ ನಡೆದ ಭಾರತ–ಚೀನಾ ಗಡಿ ಕದನದ ಬಗ್ಗೆ ಸಂಸತ್‌ನಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಇಂದು (ಡಿ.21) ಪಾರ್ಲಿಮೆಂಟ್ ಮುಂಭಾಗ ಧರಣಿ ನಡೆಸಲು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕರೆ ನೀಡಿದ್ದಾರೆ.

ಸಮಾನ ಮನಸ್ಕರು ಈ ಧರಣಿಯಲ್ಲಿ ಪಾಲ್ಗೊಳ್ಳಬೇಕು ಎಂದುಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.ಇಂದು ಬೆಳಿಗ್ಗೆ 11ಕ್ಕೆ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ.

ಈ ಪ್ರತಿಭಟನೆಯಲ್ಲಿ ಸುಮಾರು 12 ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಬಹುದು ಎಂದು ತಿಳಿದು ಬಂದಿದೆ.

ADVERTISEMENT

ಡಿಸೆಂಬರ್ 9 ರಂದು ಅರುಣಾಚಲಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಚೀನಾ ಯೋಧರು ಹಾಗೂ ಭಾರತದ ಯೋಧರ ನಡುವೆ ಘರ್ಷಣೆ ನಡೆದಿತ್ತು. ಕೆಲ ದಿನಗಳ ನಂತರ ಇದು ಸುದ್ದಿಯಾಗಿತ್ತು. ಈ ವಿಷಯವನ್ನು ಕೇಂದ್ರ ಸರ್ಕಾರ ಮುಚ್ಚಿಟ್ಟು ರಾಜಕೀಯ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.

ಇನ್ನೊಂದೆಡೆ ಭಾರತ್ ಜೋಡೊ ಯಾತ್ರೆಯಲ್ಲಿ ಖರ್ಗೆ ಅವರು ಬಿಜೆಪಿ ಬಗ್ಗೆ ನೀಡಿರುವ ಹೇಳಿಕೆ ಕೋಲಾಹಲ ಹುಟ್ಟಿ ಹಾಕಿದೆ. ಈ ವಿಷಯ ಬಿಜೆಪಿ– ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಅಲವರ್‌ನಲ್ಲಿ ಸೋಮವಾರ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯಲ್ಲಿ ‘ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ ನಾಯಕರು ಹೋರಾಡಿದ್ದಾರೆ. ರಾಷ್ಟ್ರಕ್ಕಾಗಿ ಬಲಿದಾನ ನೀಡಿದ್ದಾರೆ. ಆದರೆ, ಬಿಜೆಪಿಯ ಒಂದು ನಾಯಿಯೂ ದೇಶಕ್ಕಾಗಿ ಸತ್ತಿಲ್ಲ’ ಎಂದು ಟೀಕಿಸಿದ್ದರು.

ಖರ್ಗೆ ಅವರ ಈ ಹೇಳಿಕೆ ಖಂಡಿಸಿ ಸಂಸತ್‌ ಮೇಲ್ಮನೆಯ ನಾಯಕ ಪೀಯೂಷ್‌ ಗೋಯೆಲ್‌, ‘ಖರ್ಗೆ ಅವರಿಗೆ ಹೇಗೆ ಮಾತನಾಡಬೇಕೆನ್ನುವುದು ತಿಳಿದಿಲ್ಲ. ಅವರ ಹೇಳಿಕೆ ಕಾಂಗ್ರೆಸಿಗರಲ್ಲಿರುವ ಅಸೂಯೆಯನ್ನು ಪ್ರತಿಬಿಂಬಿಸುತ್ತದೆ. ಅವರು ತಮ್ಮ ಕೀಳುಮಟ್ಟದ ಹೇಳಿಕೆಗಾಗಿ ಕ್ಷಮೆಯಾಚಿಸಲೇಬೇಕು’ ಎಂದು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.