ADVERTISEMENT

ಸಿಂಧೂರ’ ಚರ್ಚೆ | ಭದ್ರತಾ ಲೋ‍ಪ: ಶಾ ಹೊಣೆ ಹೊರಬೇಕು; ಮಲ್ಲಿಕಾರ್ಜುನ ಖರ್ಗೆ

‘ಸಿಂಧೂರ’ ಚರ್ಚೆ: ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 15:45 IST
Last Updated 29 ಜುಲೈ 2025, 15:45 IST
‘ಆಪರೇಷನ್‌ ಸಿಂಧೂರ’ ವಿಷಯದ ಚರ್ಚೆಯಲ್ಲಿ ಖರ್ಗೆ ಮಾತನಾಡಿದರು
‘ಆಪರೇಷನ್‌ ಸಿಂಧೂರ’ ವಿಷಯದ ಚರ್ಚೆಯಲ್ಲಿ ಖರ್ಗೆ ಮಾತನಾಡಿದರು   

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣವಾದ ‘ಭದ್ರತಾ ಲೋಪ’ದ ಹೊಣೆಯನ್ನು ಗೃಹ ಸಚಿವ ಅಮಿತ್ ಶಾ ಹೊರಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. 

ಆಪರೇಷನ್‌ ಸಿಂಧೂರ ಕುರಿತು ರಾಜ್ಯಸಭೆಯಲ್ಲಿ ಮಂಗಳವಾರ ನಡೆದ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿಗೆ ಭದ್ರತಾ ಲೋಪ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ತಾವು ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಖರ್ಗೆ ಪ್ರಶ್ನಿಸಿದರು. 

ADVERTISEMENT

ಭಯೋತ್ಪಾದನಾ ದಾಳಿಗಳನ್ನು ತಡೆಯುವಲ್ಲಿ ಸರ್ಕಾರ ಎಡವಿದ್ದು, ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕು ಎಂದು ಖರ್ಗೆ ಒತ್ತಾಯಿಸಿದರು. ಭದ್ರತಾ ಲೋಪಗಳ ಕುರಿತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೀಡಿದ್ದ ಹೇಳಿಕೆಯು ಗೃಹ ಸಚಿವರ ‘ಕುರ್ಚಿ ಉಳಿಸುವ’ ಗುರಿಯನ್ನು ಹೊಂದಿದೆಯೇ ಎಂದು ಪ್ರಶ್ನಿಸಿದರು.

‘ಪಹಲ್ಗಾಮ್‌ನಲ್ಲಿ ನಡೆದದ್ದು ದುರದೃಷ್ಟಕರ ಘಟನೆ. ಭದ್ರತಾ ಲೋಪದಿಂದ ದಾಳಿ ನಡೆದಿದೆ ಎಂಬುದನ್ನು ಸಿನ್ಹಾ ಸ್ವತಃ ಒಪ್ಪಿಕೊಂಡಿದ್ದಾರೆ. ಘಟನೆಯ ಸಂಪೂರ್ಣ ಹೊಣೆಯನ್ನು ಹೊರುವುದಾಗಿ ಅವರು ಹೇಳಿದ್ದಾರೆ. ಆದರೆ, ಭದ್ರತಾ ಲೋಪಕ್ಕೆ ಗೃಹ ಸಚಿವರು ಹೊಣೆಗಾರರಾಗಬೇಕೇ ಹೊರತು ಲೆಫ್ಟಿನೆಂಟ್ ಗವರ್ನರ್ ಅಲ್ಲ’ ಎಂದು ಖರ್ಗೆ ಹೇಳಿದರು.

‘ಉರಿ, ಪಠಾಣ್‌ಕೋಟ್, ಪುಲ್ವಾಮಾ ಬಳಿಕ ಈಗ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಈ ಎಲ್ಲಾ ದಾಳಿಗಳು ಗುಪ್ತಚರ ವೈಫಲ್ಯವನ್ನು ತೋರಿಸುತ್ತದೆ. ಇದಕ್ಕೆ ಯಾರು ಹೊಣೆ ಎಂದು ಗೃಹ ಸಚಿವರನ್ನು ಕೇಳಲು ಬಯಸುತ್ತೇನೆ. ಪದೇ ಪದೇ ಆಗುತ್ತಿರುವ ತಪ್ಪನ್ನು ಸರಿಪಡಿಸಲು ನೀವು ಏನು ಮಾಡಿದ್ದೀರಿ? ನೀವು ನಿಮ್ಮ ಹುದ್ದೆ ತ್ಯಜಿಸಿ’ ಎಂದು ಹರಿಹಾಯ್ದರು.

ಕಾರ್ಗಿಲ್ ಯುದ್ಧದ ಬಳಿಕ ವರದಿ ಬಿಡುಗಡೆ ಮಾಡಿದಂತೆ ಪಹಲ್ಗಾಮ್ ದಾಳಿ ಬಗ್ಗೆಯೂ ಸರ್ಕಾರ ವರದಿ ಬಿಡುಗಡೆ ಮಾಡಬೇಕು
ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ

- ಖರ್ಗೆ ಮುಂದಿಟ್ಟ ಪ್ರಶ್ನೆಗಳು...

* ಪಾಕಿಸ್ತಾನ ಹಿನ್ನಡೆ ಅನುಭವಿಸಿದರೂ ಭಾರತ ಕದನ ವಿರಾಮವನ್ನು ಒಪ್ಪಿಕೊಂಡದ್ದು ಏಕೆ?

* ಕದನ ವಿರಾಮದ ಷರತ್ತುಗಳೇನು?

* ಆಪರೇಷನ್‌ ಸಿಂಧೂರ ವೇಳೆ ಅಮೆರಿಕವು ಮಧ್ಯಪ್ರವೇಶಿಸಿದೆಯೇ?

* ಯಾರ ಸೂಚನೆಯಂತೆ ಕದನ ವಿರಾಮಕ್ಕೆ ಒಪ್ಪಿಕೊಳ್ಳಲಾಯಿತು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.