
ನವದೆಹಲಿ: ಸಂಸತ್‌ನಲ್ಲಿ ಸುಗಮ ಕಲಾಪಕ್ಕೆ ಸಹಕರಿಸುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬರೆದಿರುವ ಭಾವನಾತ್ಮಕ ಪತ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪತ್ರದ ಮೂಲಕವೇ ತೀಕ್ಷ್ಣಭಾವದಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
ಮಣಿಪುರ ಸಂಘರ್ಷದಿಂದ ಮುಂಗಾರು ಅಧಿವೇಶನ ಹಳಿ ತಪ್ಪಿರುವುದರಿಂದ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ನಾಯಕರಾದ ಖರ್ಗೆ ಹಾಗೂ ಅಧೀರ್ ರಂಜನ್ ಚೌಧರಿ ಅವರಿಗೆ ಶಾ ಅವರು ಮಂಗಳವಾರ ಪತ್ರ ಬರೆದಿದ್ದರು. ‘ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆಗೆ ‘ನಿಮ್ಮ ಅಮೂಲ್ಯ ಸಹಕಾರ ಅತ್ಯಗತ್ಯ’ ಎಂದು ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಖರ್ಗೆ, ‘ಇಂಡಿಯಾ’ ಬಗ್ಗೆ ‘ಪದ ಪ್ರಯೋಗ’ ಹಾಗೂ ಪ್ರತಿಪಕ್ಷಗಳನ್ನು ನಡೆಸಿಕೊಳ್ಳುತ್ತಿರುವ ಸರ್ಕಾರದ ನಡೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
‘ಸಂಸತ್‌ನ ಮಹತ್ವದ ಬಗ್ಗೆ ಪತ್ರದಲ್ಲಿ ನೀವು ಭಾವನಾತ್ಮಕವಾಗಿ ಪ್ರಸ್ತಾಪಿಸಿದ್ದೀರಿ. ಆದರೆ, ಸರ್ಕಾರವು ಸಂವೇದನಾರಹಿತ ಹಾಗೂ ನಿರಂಕುಶವಾಗಿ ವರ್ತಿಸುತ್ತಿದೆ. ಈ ವರ್ತನೆ ಹೊಸದೇನಲ್ಲ. ಹಲವು ಅಧಿವೇಶನಗಳಲ್ಲಿ ಇದೇ ಧೋರಣೆ ತಳೆದಿದೆ’ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ‘ಇಂಡಿಯಾ’ವನ್ನು ಬ್ರಿಟಿಷರ ಆಳ್ವಿಕೆ ಮತ್ತು ಭಯೋತ್ಪಾದನೆ ಸಂಘಟನೆಗಳ ಜೊತೆಗೆ ಸಮೀಕರಿಸಿದ್ದಾರೆ. ಅದೇ ದಿನದಂದು ನೀವು ಸಹಕಾರ ಕೋರಿ ಪತ್ರ ಬರೆದು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದೀರಿ. ಒಂದೇ ದಿನದಲ್ಲಿ ಇಂತಹ ವೈರುಧ್ಯ ಮನಸ್ಥಿತಿ ಏಕೆ ಎಂದು ಪ್ರಶ್ನಿಸಿದ್ದಾರೆ.
‘ಹಲವು ವರ್ಷಗಳಿಂದ ಆಡಳಿತಾರೂಢ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಸಹಕಾರದ ಕೊರತೆ ಇದೆ. ಮೋದಿ ಸರ್ಕಾರವು ಇದೇ ಅಂತರ ಕಾಯ್ದುಕೊಂಡಿದೆ. ಪ್ರಧಾನಿ ಅವರೇ ವಿಪಕ್ಷಗಳನ್ನು ಅಸಂಬದ್ಧವಾಗಿ ಟೀಕಿಸಿರುವುದು ದುರದೃಷ್ಟಕರ’ ಎಂದಿದ್ದಾರೆ.
ಕಣಿವೆ ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ತಲೆದೋರಿ 84 ದಿನಗಳು ಉರುಳಿವೆ. ಎಲ್ಲಾ ಪಕ್ಷಗಳು ಅಲ್ಲಿ ಶಾಂತಿ ಪುನರ್ ಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ಸಂಸತ್ ಮೂಲಕ ದೇಶದ ಜನರಿಗೆ ಈ ಸಂದೇಶ ತಲುಪಿಸಬೇಕಿದೆ. ಅದಕ್ಕಾಗಿಯೇ ಮೋದಿ ಹೇಳಿಕೆ ನೀಡುವಂತೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಣ್ಣ ತಪ್ಪಿಗಾಗಿ ರಾಜ್ಯಸಭೆಯಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ. ಪತ್ರದ ಮೂಲಕ ಸದಸ್ಯರ ಭಾವನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಸರ್ಕಾರ ಸುಗಮವಾಗಿ ಆಧಿವೇಶನ ನಡೆಯಬೇಕು ಎಂದು ಬಯಸಿದರೆ, ವಿರೋಧ ಪಕ್ಷಗಳ ಮಂಡಿಸುವ ವಿಷಯಗಳ ಚರ್ಚೆಗೂ ಅವಕಾಶ ಕಲ್ಪಿಸಬೇಕಿದೆ ಎಂದಿದ್ದಾರೆ.
ನಿಯಮ 267ರ ಅಡಿ ಚರ್ಚೆಗೆ ಪ್ರತಿದಿನವೂ ನೋಟಿಸ್ ನೀಡಿ ಅನುಮತಿ ಕೇಳುತ್ತಿದ್ದೇವೆ. ಆದರೆ, ಎರಡೂ ಸದನಗಳಲ್ಲಿ ಸ್ಪೀಕರ್ ಹಾಗೂ ಸಭಾಪತಿಯಿಂದ ಸಹಕಾರ ಸಿಗುತ್ತಿಲ್ಲ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.