
ಜೌನಪುರ (ಉತ್ತರ ಪ್ರದೇಶ): ಮೋಟರ್ ಸೈಕಲ್‌ನಲ್ಲಿ ತೆರಳುತ್ತಿದ್ದ ಫಿಸಿಯೋಥೆರಪಿಸ್ಟ್ ಒಬ್ಬರ ಕೊರಳಿಗೆ ನಿಷೇಧಿತ ‘ಚೈನೀಸ್ ಮಾಂಜಾ’ ಸುತ್ತಿಕೊಂಡಿದ್ದರಿಂದ ಅವರ ಕುತ್ತಿಗೆ ಸೀಳಿ, ಬುಧವಾರ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಕೆರಕತ್ ಕೊತ್ವಾಲಿ ನಗರದ ನಿವಾಸಿ ಮೊಹಮ್ಮದ್ ಶಮೀರ್ ಎಂದು ಗುರುತಿಸಲಾಗಿದೆ. ಪಚಾಟಿಯಾ ಗ್ರಾಮದ ಪ್ರಸಾದ್ ಇಂಟರ್‌ನ್ಯಾಷನಲ್ ಸ್ಕೂಲ್ ಬಳಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ಶ್ರೀವಾಸ್ತವ ಅವರು ಮಾಹಿತಿ ನೀಡಿದ್ದಾರೆ.
ಜೌನಪುರದಲ್ಲಿ ವೈದ್ಯರೊಬ್ಬರನ್ನು ಭೇಟಿಯಾಗಲು ಶಮೀರ್ ಬಂದಿದ್ದರು. ಅವರು ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಶಾಲೆಯ ಬಳಿ ಗಾಳಿಪಟ ಹಾರಿಸಲು ಬಳಸುವ ‘ಚೈನೀಸ್ ಮಾಂಜಾ‘ (ಗಾಜು ಲೇಪಿತ ಸಿಂಥೆಟಿಕ್ ಸೂತ್ರ) ಅವರ ಕುತ್ತಿಗೆಗೆ ಸುತ್ತಿಕೊಂಡು ಸೀಳಿದೆ.
ಟ್ರಾಫಿಕ್ ಇನ್‌ಸ್ಪೆಕ್ಟರ್ ಸುಶೀಲ್ ಮಿಶ್ರಾ ಅವರು ತಕ್ಷಣವೇ ಸ್ಥಳಕ್ಕೆ ತೆರಳಿ, ಆಂಬುಲೆನ್ಸ್ ಮೂಲಕ ಶಮೀರ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ತೀವ್ರಗಾಯಗೊಂಡಿದ್ದ ಶಮೀರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಲಭ್ಯ–ಕಳವಳ:
ಚೈನೀಸ್ ಮಾಂಜಾ ಬಳಕೆಗೆ ನಿಷೇಧವಿದ್ದರೂ ಹಲವು ಕಡೆ ಅವುಗಳನ್ನು ಬಳಸಲಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಆನ್‌ಲೈನ್ ಮೂಲಕ ಅವುಗಳನ್ನು ಮಾರಾಟ ಮಾಡುತ್ತಿರುವುದು ಹೊಸ ಸವಾಲಾಗಿ ಪರಿಣಮಿಸಿದೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.