
ತಿರುವನಂತಪುರಂ (ಪಿಟಿಐ): ‘ಮನೆಗಳನ್ನು ಧ್ವಂಸಗೊಳಿಸಿದ ಸಂದರ್ಭದಲ್ಲಿ ಪ್ರತಿಕ್ರಿಯೆಗಳನ್ನು ನೀಡುವಾಗ ರಾಜ್ಯದ ಗಡಿಗಳಿಗಷ್ಟೇ ಸೀಮಿತಗೊಳಿಸುವುದಿಲ್ಲ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
‘ಶಿವಗಿರಿಯ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ ಸಂದರ್ಭದಲ್ಲಿ ಅವರ ಮುಂದೆ ನಿಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೀರಾ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು (ಸಿದ್ದರಾಮಯ್ಯ) ತಡವಾಗಿ ಬಂದರು. ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಅನುಮತಿ ಪಡೆದುಕೊಂಡು ಅಲ್ಲಿಂದ ತೆರಳಿದೆನು’ ಎಂದು ಹೇಳಿದ್ದಾರೆ.
‘ಸಚಿವ ಸಂಪುಟ ಸಭೆಗೂ ಮುನ್ನ ನಟ ಮೋಹನ್ ಲಾಲ್ ತಾಯಿ ನಿಧನರಾಗಿದ್ದರಿಂದ ಅಲ್ಲಿಗೆ ತೆರಳಿ ಸಂತಾಪ ಸಲ್ಲಿಸಿದ್ದೆನು, ಸಭೆಯ ಬಳಿಕ ಕಣ್ಣೂರಿನಲ್ಲಿ ಮೃತಪಟ್ಟ ಪಕ್ಷದ ನಾಯಕರಿಗೆ ಸಂತಾಪ ಸಲ್ಲಿಸಲು ಅಲ್ಲಿಗೆ ತೆರಳಿದ್ದೆನು’ ಎಂದು ತಿಳಿಸಿದ್ದಾರೆ.
‘ಮನೆಗಳ ಧ್ವಂಸದ ವಿಚಾರದಲ್ಲಿ ಮಧ್ಯಪ್ರವೇಶಿಸಬೇಡಿ’ ಎಂಬ ಕರ್ನಾಟಕ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಮನೆಗಳ ಧ್ವಂಸ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ವಿಚಾರ ಬಂದಾಗ ನಾವು ನಮ್ಮ ಪ್ರತಿಕ್ರಿಯೆಗಳನ್ನು ಯಾವುದೇ ಗಡಿಗಳಿಗೆ ಸೀಮಿತಗೊಳಿಸುವುದಿಲ್ಲ. ನಾವು ಇಂತಹ ವಿಷಯಗಳಿಗೆ ಕಠಿಣವಾಗಿ ಪ್ರತಿಕ್ರಿಯಿಸಿದ್ದೇವೆ. ಪ್ಯಾಲೆಸ್ಟೀನಿನ ಗಾಜಾ ಸೇರಿದಂತೆ ಬೇರೆ ದೇಶಗಳಲ್ಲಿ ನಡೆದ ವೇಳೆ ಕೂಡ ಇದೇ ರೀತಿಯಾಗಿ ನಮ್ಮ ನಿಲುವು ತಿಳಿಸಿದ್ದೇವೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
‘ಬುಲ್ಡೋಜರ್‌ನಿಂದ ಅಸಹಾಯಕ ಜನರು ಮನೆಗಳನ್ನು ಕಳೆದುಕೊಂಡಾಗ ಪ್ರತಿಕ್ರಿಯಿಸುವುದು ಸಹಜ’ ಎಂದು ಹೇಳಿದ್ದಾರೆ.
‘ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಮನೆಗಳನ್ನು ಧ್ವಂಸಗೊಳಿಸಿದ ನಡೆಯು ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡು ನಡೆದ ರಾಜಕೀಯವಾಗಿದೆ. ಇಂತಹ ಪ್ರಕ್ರಿಯೆಗಳು ಉತ್ತರ ಭಾರತದಲ್ಲಿ ನಡೆಯುತ್ತಿತ್ತು, ಈಗ ದಕ್ಷಿಣಕ್ಕೂ ಇಂತಹ ವರ್ತನೆಗಳು ವಿಸ್ತರಿಸಿದೆ’ ಎಂದು ಪಿಣರಾಯಿ ವಿಜಯನ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.
‘ಕರ್ನಾಟಕದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅಡಿಯಲ್ಲಿ ‘ಬುಲ್ಡೋಜರ್ ನ್ಯಾಯ’ ನಡೆದಿರುವುದು ಆಶ್ಚರ್ಯಕರ’ ಎಂದು ಪಿಣರಾಯಿ ಹೇಳಿದ್ದರು.
ವಿಜಯನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಯಾವುದೇ ಮಾಹಿತಿ ತಿಳಿಯದೇ, ಹಿರಿಯ ನಾಯಕರಾದಂತಹ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜನಯನ್ ಅವರು ಹೇಳಿಕೆ ನೀಡಿರುವುದು ದುರದೃಷ್ಟಕರ. ಉತ್ತರ ಬೆಂಗಳೂರಿನಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಯಂತಹ ಕರ್ನಾಟಕದ ವಿಚಾರದಲ್ಲಿ ಮಧ್ಯ ಪ್ರವೇಶಿಸಬಾರದು’ ಎಂದು ಸಲಹೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.