ರಕ್ಷಣಾ ಕಾರ್ಯಾಚರಣೆ
(ಪಿಟಿಐ ಚಿತ್ರ)
ಕೋಲ್ಕತ್ತ: ಇಲ್ಲಿನ ಹೋಟೆಲ್‌ವೊಂದರಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 14 ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.
42 ಕೊಠಡಿಗಳಿದ್ದ 6 ಅಂತಸ್ತಿನ ರಿತುರಾಜ್ ಹೋಟೆಲ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಮೃತರಲ್ಲಿ 11 ಪುರುಷರು, ಒಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ, ಗಾಯಗೊಂಡವರಿಗೆ ₹50000 ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇದೇ ಪ್ರಮಾಣದಲ್ಲಿ ಪರಿಹಾರ ಘೋಷಿಸಿದ್ದಾರೆ.
ಮಂಗಳವಾರ ಸಂಜೆ 7.30ರ ವೇಳೆಗೆ ಹೋಟೆಲ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ 88 ಮಂದಿ ಅತಿಥಿಗಳು ಮತ್ತು ಸಿಬ್ಟಂದಿ ಇದ್ದರು. ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಹಲವರು ಗಾಬರಿಯಲ್ಲಿ ಕಿಟಕಿಗಳ ಮೂಲಕ ಹೋಟೆಲ್‌ನಿಂದ ಹೊರಕ್ಕೆ ಹಾರಿ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸತತ 10 ಗಂಟೆ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ಟಿಎಂಸಿ ವಿರುದ್ಧ ಬಿಜೆಪಿ ಕಿಡಿ: ದುರ್ಘಟನೆಗೆ ಟಿಎಂಸಿ ನೇತೃತ್ವದ ಸರ್ಕಾರವೇ ಹೊಣೆ ಎಂದು ಬಿಜೆಪಿ ಆರೋಪಿಸಿದೆ. ಅಕ್ರಮ ಕಟ್ಟಡಗಳ ತೆರವಿಗೆ ಸರ್ಕಾರ ಕ್ರಮ ಕೈಗೊಳ್ಳದೇ ಇನ್ನೂ ಎಷ್ಟು ಜೀವಗಳನ್ನು ಬಲಿ ಪಡೆಯಲಿದೆ ಎಂದು ಬಿಜೆಪಿ ನಾಯಕ ಸಜಾಲ್ ಘೋಷ್ ಪ್ರಶ್ನಿಸಿದ್ದಾರೆ. ಜತೆಗೆ ‘14 ಮಂದಿ ಅಮಾಯಕರು ಜೀವ ಕಳೆದುಕೊಂಡಿದ್ದು, ಇನ್ನೂ ಹಲವರು ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿ ಮೌನ ವಹಿಸಿ, ತಮ್ಮ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗಿದ್ದಾರೆ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಟೀಕೆ ಮಾಡಿದ್ದಾರೆ.
ನಿರ್ಲಕ್ಷ್ಯವೇ ಕಾರಣ? ಅವಘಡಕ್ಕೆ ಕಾರಣವೇನು ಎಂದು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದ್ದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಮತ್ತೊಂದೆಡೆ ಹೋಟೆಲ್ ಮಾಲಿಕರ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವಾಗಿ ಹೋಟೆಲ್‌ನಲ್ಲಿ ಅಕ್ರಮವಾಗಿ ಡಾನ್ಸ್ ಬಾರ್ ನಿರ್ಮಿಸುವುದಕ್ಕಾಗಿ ಸ್ಟೇರ್‌ಕೇಸ್ ಮತ್ತು ವೆಂಟಿಲೇಷನ್ ಪಾಯಿಂಟ್ಸ್‌ಗಳನ್ನು ಮುಚ್ಚಲಾಗಿತ್ತು. ಫೈರ್ ಅಲಾರಂ ಕೂಡ ನಿಷ್ಕ್ರಿಯವಾಗಿತ್ತಲ್ಲದೇ ಹೋಟೆಲ್‌ನ ಅಗ್ನಿಶಾಮಕ ಸುರಕ್ಷತಾ ಅನುಮತಿ ಕೂಡ 2022ರಲ್ಲೇ ಮುಕ್ತಾಯಗೊಂಡಿದೆ ಎಂದು ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಚಿವ ಸುಜಿತ್ ಬೋಸ್ ಹೇಳಿದ್ದಾರೆ. ಘಟನೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು ಹೋಟೆಲ್ ಮಾಲಿಕರು ತಲೆಮರೆಸಿಕೊಂಡಿದ್ದಾರೆಂದೂ ತಿಳಿಸಿದ್ದಾರೆ.
16 ಗಂಟೆ ಬಳಿಕ ಬೆಕ್ಕಿನ ರಕ್ಷಣೆ
ಜನರ ರಕ್ಷಣೆಯಲ್ಲಿ ತೊಡಗಿದ್ದ ಅಗ್ನಿಶಾಮಕ ಸಿಬ್ಬಂದಿ ಹೋಟೆಲ್‌ನಲ್ಲಿ 16 ಗಂಟೆಗಳ ಕಾಲ ಸಿಲುಕಿದ್ದ ಬೆಕ್ಕೊಂದನ್ನು ಬುಧವಾರ ರಕ್ಷಿಸಿದ್ದಾರೆ. ಹೋಟೆಲ್ ಕಟ್ಟಡದ 3ನೇ ಅಂತಸ್ತಿನ ಕೊಠಡಿಯಲ್ಲಿ ಸಿಲುಕಿ ಹೊರಬರಲು ಪರಿತಪಿಸುತ್ತಿದ್ದ ಬೆಕ್ಕನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗೆ ಬೆಕ್ಕಿನ ಸುಳಿವು ಮೊದಲಿಗೆ ಸಿಕ್ಕಿರಲಿಲ್ಲ. ಬುಧವಾರ ಸಂಜೆ 4 ಗಂಟೆ ಸಮಯದಲ್ಲಿ ಬೆಕ್ಕಿನ ಶಬ್ದ ಕೇಳಿ ರಕ್ಷಣೆ ಮಾಡಿದ್ದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.