ADVERTISEMENT

ಬಿಹಾರ: ನೀಟ್ ತಯಾರಿಯಲ್ಲಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಪಿಟಿಐ
Published 2 ಅಕ್ಟೋಬರ್ 2025, 15:51 IST
Last Updated 2 ಅಕ್ಟೋಬರ್ 2025, 15:51 IST
   

ಕೋಟ: ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 21 ವರ್ಷದ ಅಭ್ಯರ್ಥಿಯೊಬ್ಬರ ಮೃತದೇಹ ಇಲ್ಲಿನ ಪಿ.ಜಿ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಿಹಾರದ ಪಟ್ನಾ ಮೂಲದ ಲಕ್ಕಿ ಚೌಧರಿ ಮೃತ ಯುವಕ. ಎರಡು ವರ್ಷಗಳಿಂದ ಕೋಟದಲ್ಲಿದ್ದ ಲಕ್ಕಿ ನೀಟ್‌ ಆನ್‌ಲೈನ್‌ ಪರೀಕ್ಷೆಗೆ ಸಜ್ಜಾಗುತ್ತಿದ್ದರು. ಬುಧವಾರ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಆತನ ಕೊಠಡಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು ಎಂದು ವಿಜ್ಞಾನ ನಗರ ಪೊಲೀಸ್ ವೃತ್ತ ನಿರೀಕ್ಷಕ ಮುಕೇಶ್ ಮೀನಾ ಅವರು ತಿಳಿಸಿದ್ದಾರೆ.

ಮತ್ತೊಂದೆಡೆ ಲಕ್ಕಿಯ ಕೊಠಡಿ ಪಕ್ಕದಲ್ಲೇ ಇದ್ದ ಬಿಹಾರ ಮೂಲದ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಲಕ್ಕಿ ಸಂಬಂಧಿ ಕೋಶಲ್‌ ಕುಮಾರ್ ಚೌಧರಿ, ‘ನಮ್ಮ ಹುಡುಗ ಆತ್ಮಹತ್ಯೆ ಮಾಡಿಕೊಳ್ಳುವಂಥವನಲ್ಲ. ಸಾವಿಗೂ ಮುನ್ನ ಪತ್ರ ಬರೆದಿಟ್ಟಿಲ್ಲ. ಮೊಬೈಲ್‌ ಮತ್ತು ವಾಲೆಟ್‌ ಕೂಡ ಕಾಣಿಸುತ್ತಿಲ್ಲ. ಪಟ್ನಾದವನೇ ಆದ ರಾಹುಲ್‌ ಎಂಬಾತನ ಮೇಲೆ ನನಗೆ ಅನುಮಾನ ಇದೆ’ ಎಂದು ಶವಾಗಾರದ ಬಳಿ ಆರೋಪಿಸಿದ್ದಾರೆ.

ADVERTISEMENT

‘ರಾಹುಲ್‌ ತನ್ನ ಸ್ನೇಹಿತೆ ಜೊತೆ ನನ್ನ ಮಗನ ಕೊಠಡಿಗೆ ಆಗಾಗ ಭೇಟಿ ನೀಡುತ್ತಿದ್ದ’ ಎಂದು ಲಕ್ಕಿ ತಂದೆ ಆರೋಪಿಸಿದ್ದರೆ, ‘ನನ್ನ ಸಹೋದರ ₹40,000 ಸಾಲ ಪಡೆದಿದ್ದ. ಸಾಲಗಾರರ ಒತ್ತಡ ಇತ್ತು’ ಎಂದು ಲಕ್ಕಿ ಸೋದರಿ ಹೇಳಿದ್ದಾರೆ. ಆದರೆ ಪೊಲೀಸರು ಸದ್ಯಕ್ಕೆ ಇಂತಹ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ. 

ಬಿಎನ್‌ಎಸ್‌ ಸೆಕ್ಷನ್‌ 194ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಬ್‌ ಇನ್‌ಸ್ಪೆಕ್ಟರ್‌ ಲಾಲ್ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.