ADVERTISEMENT

ಕೃಷ್ಣಾ ವಿವಾದ: ಕಾನೂನು ತಂಡಕ್ಕಿಲ್ಲ ಮಾರ್ಗದರ್ಶನ

ವಿಚಾರಣೆಗೆ ಸನ್ನದ್ಧವಾಗದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 19:46 IST
Last Updated 28 ಸೆಪ್ಟೆಂಬರ್ 2019, 19:46 IST
   

ನವದೆಹಲಿ: ಕೃಷ್ಣಾ ನದಿ ನೀರು ವಿವಾದ ನ್ಯಾಯಮಂಡಳಿಯ ಐ ತೀರ್ಪು ಪ್ರಶ್ನಿಸಿ ಕರ್ನಾಟಕ ಸೇರಿದಂತೆ ಕಣಿವೆ ವ್ಯಾಪ್ತಿಯ ರಾಜ್ಯಗಳು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಕೆಲವೇ ದಿನಗಳಲ್ಲಿ ನಡೆಯಲಿದೆ.

ಆದರೆ, ನ್ಯಾಯಾಲಯದಲ್ಲಿ ವಾದ ಮಂಡನೆ ಕುರಿತ ಕಾರ್ಯತಂತ್ರ ರೂಪಿಸುವ ಮತ್ತು ಸಿದ್ಧತೆ ನಡೆಸುವ ನಿಟ್ಟಿನಲ್ಲಿ ದೆಹಲಿಯಲ್ಲಿರುವ ರಾಜ್ಯದ ಕಾನೂನು ತಂಡಕ್ಕೆ ಸರ್ಕಾರದಿಂದ ಇದುವರೆಗೆ ಯಾವುದೇ ರೀತಿಯ ಸೂಚನೆ ದೊರೆತಿಲ್ಲ.

ರಾಜ್ಯ ವಿಭಜನೆಯ ನಂತರ ಹೊಸದಾಗಿ ಕೃಷ್ಣಾ ನೀರಿನ ಹಂಚಿಕೆ ಕೋರಿ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿ ನೀಡಿದ್ದ ಐ ತೀರ್ಪನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆಯೂ ಇದೇ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

ADVERTISEMENT

‘ಆ ಎರಡೂ ರಾಜ್ಯಗಳು ಹಾಗೂ ಕಣಿವೆ ವ್ಯಾಪ್ತಿಯ ಮಹಾರಾಷ್ಟ್ರದ ಕಾನೂನು ತಂಡಗಳು ಪ್ರಕರಣ ಕುರಿತು ಸಮರ್ಥ ವಾದ ಮಂಡನೆಗೆ ಸಕಲ ಸಿದ್ಧತೆ ನಡೆಸಿವೆ. ಆದರೆ, ರಾಜ್ಯ ಸರ್ಕಾರವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ರೀತಿಯ ಸಭೆ ನಡೆಸಿಲ್ಲ. ಒಂದು ವರ್ಷದಿಂದ ರಾಜ್ಯ ಸರ್ಕಾರ ಸಂಪರ್ಕಿಸಿಲ್ಲ’ ಎಂದು ಕಾನೂನು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.

ನ್ಯಾಯಮಂಡಳಿ ಹಂಚಿಕೆ ಮಾಡಿರುವ ನೀರಿನ ಪ್ರಮಾಣ ಹೆಚ್ಚಿಸುವಂತೆ ಕೋರಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆಯು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠದೆದುರು ಅಕ್ಟೋಬರ್‌ ಅಂತ್ಯಕ್ಕೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಎತ್ತರಿಸಲು ನ್ಯಾಯಮಂಡಳಿ ಒಪ್ಪಿಗೆ ಸೂಚಿಸಿದೆ. ಇದನ್ನು ತೆಲಂಗಾಣ ವಿರೋಧಿಸಿದೆ. ಹೊಸದಾಗಿ ರಚಿತಗೊಂಡಿರುವ ರಾಜ್ಯಕ್ಕೆ ಅಧಿಕ ಪ್ರಮಾಣದ ನೀರು ಹಂಚಿಕೆ ಮಾಡಬೇಕು ಎಂದು ತಗಾದೆ ತೆಗೆದಿದೆ. ಇದನ್ನು ವಿರೋಧಿಸಿ ಸೂಕ್ತ ರೀತಿಯ ವಾದ ಮಂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.