ADVERTISEMENT

ಮಂಡ್ಯದಲ್ಲಿ ನಿಖಿಲ್ ವಿರುದ್ಧ ಕಾಂಗ್ರೆಸ್ ಚಕ್ರವ್ಯೂಹ ರಚಿಸಿದೆ: ಕುಮಾರಸ್ವಾಮಿ

ಪಿಟಿಐ
Published 5 ಏಪ್ರಿಲ್ 2019, 15:33 IST
Last Updated 5 ಏಪ್ರಿಲ್ 2019, 15:33 IST
   

ಚಿಕ್ಕಮಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಪುತ್ರ ನಿಖಿಲ್ವಿರುದ್ಧ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಚಕ್ರವ್ಯೂಹ ರಚಿಸಿವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

‘ಮಂಡ್ಯದಲ್ಲಿ ಜೆಡಿಎಸ್‌ ಮಣಿಸಲು ಬಿಜೆಪಿ, ಕಾಂಗ್ರೆಸ್‌, ರೈತಸಂಘ ಎಲ್ಲವೂ ಒಗ್ಗೂಡಿವೆ. ಎಲ್ಲ ರೀತಿಯ ಚಕ್ರವ್ಯೂಹ ರಚನೆ ನಡೆಸಿರುವುದಕ್ಕೆ ಅಲ್ಲಿನ ಜನತೆ ಉತ್ತರ ನೀಡಲಿದ್ದಾರೆ’ ಎಂದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಡ್ಯದಲ್ಲಿ ಕೈಮೀರುವಂಥ ಕೆಲ ಘಟನೆಗಳು ನಡೆದಿವೆ. ಪಕ್ಷೇತರ ಅಭ್ಯರ್ಥಿಗೆ (ಎ.ಸುಮಲತಾ) ಬಿಜೆಪಿ, ಕಾಂಗ್ರೆಸ್‌, ರೈತಸಂಘದ ಬೆಂಬಲ ಇದೆ. ಹೆಸರಿಗಷ್ಟೇ ಅವರು ಪಕ್ಷೇತರ ಅಭ್ಯರ್ಥಿ’ ಎಂದು ಕಟಕಿಯಾಡಿದರು.

ADVERTISEMENT

‘ಮೂರು ತಿಂಗಳಿನಿಂದ ನಡೆಯುತ್ತಿರುವ ಘಟನೆಗಳು ಗೊತ್ತಿದೆ. ಆದರೆ, ಸ್ಥಳೀಯವಾಗಿ ಮಂಡ್ಯದ ಹಳ್ಳಿಗಳಲ್ಲಿ ಪರಿಸ್ಥಿತಿ ಬೇರೆ ಇದೆ. ಮೇ 23ರಂದು ಎಲ್ಲರಿಗೂ ಉತ್ತರ ನೀಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಆದಾಯ ತೆರಿಗೆ (ಐಟಿ) ದಾಳಿ ಮೂಲಕ ಅಭ್ಯರ್ಥಿಗಳನ್ನು ದುರ್ಬಲಗೊಳಿಸಲು ಸಾಧ್ಯ ಇಲ್ಲ. ಐಟಿ ದಾಳಿ ನಡೆಯುತ್ತಿರುವ ಉದ್ದೇಶ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಕೇಂದ್ರದ ಬಿಜೆಪಿ ಸರ್ಕಾರದ ನಿರ್ದೇಶನಗಳ ಮೇಲೆ ನಿರಂತರವಾಗಿ ನಡೆಯುತ್ತಿವೆ. ಇದಕ್ಕೆಲ್ಲ ಸೊಪ್ಪು ಹಾಕುವ ಪ್ರಶ್ನೆ ಇಲ್ಲ. ಹೋರಾಟಕ್ಕೆ ಸಿದ್ಧರಾಗಿಯೇ ಹೊರಟಿದ್ದೇವೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.